ಬೆಂಗಳೂರು:ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಯಿಶಾ ಬಿ.ಆರ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಆಯಿಶಾ ಇಂದು ಬೆಳಗ್ಗೆ ಬಿನ್ನಿ ಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ.
ಬಳ್ಳಾರಿ ಮೂಲದ ಆಯಿಶಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಒದುತ್ತಿದ್ದಳು. ಆದರೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಿಐಡಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಭೀಮೇಶ್ ನಾಯಕ ಎಂಬಾತನ ಪರಿಚಯವಾಗಿತ್ತು. ಇದೇ ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಮನಸ್ತಾಪ ಕೂಡ ಉಂಟಾಗಿತ್ತಂತೆ. ಬಳಿಕ ಆಯಿಶಾ ಭೀಮೇಶ್ ನಾಯಕನ ಮೇಲೆ ದೂರು ನೀಡಿದ್ದಳು.
ಪೋಕ್ಸೋ ಪ್ರಕರಣದಲ್ಲಿ ಭೀಮೇಶ್ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದ. ಜೈಲಿನಿಂದ ಹೊರಬಂದ ಮೇಲೂ ಸಹ ಇಬ್ಬರೂ ಒಂದಾಗಿ ವಾಸಿಸಲಾರಂಭಿಸಿದ್ದರು. ಆಯಿಶಾ ಮಂಗಳೂರಿನಿಂದ ಬೆಂಗಳೂರಿನ ಸಿರ್ಸಿ ಸರ್ಕಲ್ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ನ ಭೀಮೇಶ್ ಮನೆಯಲ್ಲಿ ಬಂದು ಉಳಿದುಕೊಳ್ಳುತ್ತಿದ್ದಳು. ಹೀಗೆ ಏ.24ರಂದು ಬೆಂಗಳೂರಿಗೆ ಬಂದಿದ್ದ ಆಯಿಶಾ ಭೀಮೇಶ್ ಜತೆ ಉಳಿದುಕೊಂಡಿದ್ದಳು. ಆದರೆ ಇಂದು ಬೆಳಗ್ಗೆ 8.30ಕ್ಕೆ ಭೀಮೇಶ್ ಊರಿಗೆ ತೆರಳಿದ್ದರು. ಮನೆಯಲ್ಲಿದ್ದ ಆಯಿಶಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪೊಲೀಸರು ತಿಳಿಸಿದ್ದಾರೆ.