ಬೆಂಗಳೂರು:ಎಸ್.ಸಿ.ಎಸ್.ಪಿ - ಟಿ.ಎಸ್.ಪಿ(Scheduled Caste Sub Plan ಮತ್ತುTribal Sub Plan)ಯ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ನಿರ್ಬಂಧವಿದ್ದರೂ ಗ್ಯಾರಂಟಿ ಯೋಜನೆಗಳಿಗೆ ಈ ಹಣ ಬಳಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಈ ಹಣವನ್ನು ದಲಿತರ ಅಭಿವೃದ್ಧಿಗೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ರಾಜ್ಯಾದ್ಯಂತ ಬಿಜೆಪಿ ಎಸ್‍ಸಿ ಮೋರ್ಚಾದಿಂದ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗಾಗಿ ಎಸ್‍ಸಿ ಎಸ್ಪಿ - ಟಿಎಸ್ಪಿಯ 11 ಸಾವಿರ ಕೋಟಿ ರೂಪಾಯಿಯನ್ನು ಬಳಸುತ್ತಿರುವುದಾಗಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದು ದಲಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರು ಮತ್ತು ಸಮಾಜ ಕಲ್ಯಾಣ ಸಚಿವರು ಮಾಡುತ್ತಿರುವ ಮಹಾಮೋಸ.
ಹಿಂದಿನ ಕಾಂಗ್ರೆಸ್ ಸರ್ಕಾರವು 2014ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗಾಗಿ ವಿಶೇಷ ಯೋಜನೆಯನ್ನು ಚಾಲ್ತಿಗೆ ತಂದಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಎಸ್ಸಿಎಸ್ಪಿ - ಟಿಎಸ್ಪಿ ವಿಶೇಷ ಯೋಜನೆ ಜಾರಿಗೊಳಿಸಿದ್ದರು. ಇಡೀ ದಲಿತ ಸಮುದಾಯ ಕಾಂಗ್ರೆಸ್ ಸರಕಾರವು ಒಂದು ಉತ್ತಮ ಯೋಜನೆಯನ್ನು ಕೊಟ್ಟಿದೆ ಎಂದು ಖುಷಿ ಪಟ್ಟಿತ್ತು. ಆದರೆ, ಮಾನ್ಯ ಸಿದ್ದರಾಮಯ್ಯ ಇಲ್ಲಿಯೂ ಕೂಡ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಲಿತರ ಹೆಸರಿನಲ್ಲಿ ಅವರ ಅಭಿವೃದ್ಧಿಗೆ 26 ಸಾವಿರ ಕೋಟಿ ರೂಪಾಯಿಯನ್ನು ನೀಡಿದ್ದೇನೆ ಎಂದು ಹೇಳಿ, ಅದರ ಅಡಿ 7 ಡಿ ಕಾನೂನನ್ನೂ ಜೊತೆಯಲ್ಲೇ ಜಾರಿ ಮಾಡಿದ್ದರು. ಈ ಹಣ ಖರ್ಚಾಗದಿದ್ದರೆ ಬೇರೆ ಇಲಾಖೆಗಳಿಗೆ ಖರ್ಚು ಮಾಡಬಹುದು ಎಂಬ ಅವಕಾಶವನ್ನು ಇದು ನೀಡಿತ್ತು ಎಂದು ವಿವರಿಸಿದ್ದಾರೆ.