ಬೆಂಗಳೂರು: ಜನಸಂಖ್ಯೆ ಹೆಚ್ಚಾದಂತೆ ನಗರಗಳು ಅಭಿವೃದ್ಧಿ ಹೊಂದುತ್ತಿದ್ದು, ಸ್ಮಶಾನಕ್ಕೆ ಮೀಸಲಿಟ್ಟ ಜಾಗಗಳಲ್ಲಿ ಜನವಸತಿ ಪ್ರದೇಶಗಳು ತಲೆ ಎತ್ತುತ್ತಿವೆ. ಹೀಗಾಗಿ, ರುದ್ರಭೂಮಿ ಜಾಗದ ಅಭಾವ ಸೃಷ್ಟಿಯಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ.
ರುದ್ರಭೂಮಿ ಜಾಗದ ಅಭಾವ ಸೃಷ್ಟಿ ಸ್ಮಶಾನಕ್ಕೆ ಜಾಗದ ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವ ಬೆಳಗಾವಿ ಮಹಾನಗರ ಪಾಲಿಕೆ, ಶವಗಳನ್ನು ಸ್ಮಶಾನದಲ್ಲಿ ಹೂಳುವುದಕ್ಕಿಂತ ಸುಡುವುದಕ್ಕೆ ಆದ್ಯತೆ ನೀಡುತ್ತಿದೆ. ಅದಕ್ಕಾಗಿ ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದೆ. ಪಾಲಿಕೆಯ ಈ ಕಾರ್ಯಕ್ಕೆ ನಗರ ವಾಸಿಗಳಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಾಗೆಯೇ ಮಂಗಳೂರಿನಲ್ಲೂ ಇದೇ ಸಮಸ್ಯೆ ಸೃಷ್ಟಿಯಾಗಿದೆ.
ಬೆಳಗಾವಿ ಪಾಲಿಕೆಯ ವ್ಯಾಪ್ತಿಯಲ್ಲಿ ಸದಾಶಿವ ನಗರ, ವಡಗಾವ್, ಶಹಾಪುರ, ಚಿದಂಬರ ನಗರ ಹಾಗೂ ಅನಗೋಳದಲ್ಲಿ ಸ್ಮಶಾನಕ್ಕಾಗಿ ಭೂಮಿ ಮೀಸಲಿಡಲಾಗಿದೆ. ನಗರದಲ್ಲಿ ಶೇ.60ರಷ್ಟು ಮೃತದೇಹಗಳನ್ನು ಹೂಳದೇ ಸುಡಲಾಗುತ್ತಿದೆ. ಈ ಮೂಲಕ ಜಾಗದ ಕೊರತೆ ತುಸುಮಟ್ಟಿಗೆ ನೀಗಿದೆ. ಇನ್ನು ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನಗಳಿದ್ದು, ಈ ಸಮುದಾಯಗಳಿಗೆ ಅಗತ್ಯಕ್ಕೂ ಹೆಚ್ಚು ಜಾಗ ಮೀಸಲಿದೆ. ಹೀಗಾಗಿ, ಅವರಿಗೆ ಜಾಗದ ಅಭಾವ ಸೃಷ್ಟಿಯಾಗಿಲ್ಲ.
ಆರಂಭದಲ್ಲಿ ಕಟ್ಟಿಗೆ ಮೂಲಕ ಶವಗಳನ್ನು ಸುಡಲಾಗುತ್ತಿತ್ತು. ಒಂದು ಶವದ ಅಂತ್ಯಕ್ರಿಯೆಗೆ ಕನಿಷ್ಠ ನಾಲ್ಕು ಟನ್ ಕಟ್ಟಿಗೆ ಅಗತ್ಯವಿತ್ತು. ಈ ಕಾರಣಕ್ಕೆ ವಿದ್ಯುತ್ ಚಿತಾಗಾರ ಹಾಗೂ ಡೀಸೆಲ್ ಯಂತ್ರ ಅಳವಡಿಸಿಕೊಳ್ಳಲಾಯಿತು. ಅವುಗಳಿಂದ ಬರುವ ಹೊಗೆಯಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಕಾರಣಕ್ಕೆ ಗ್ಯಾಸ್ ಸಂಪರ್ಕ ಪಡೆಯಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ ಮಹಾನಗರದ ಎಲ್ಲೆಡೆ ಗ್ಯಾಸ್ ಪೈಪ್‍ಲೈನ್ ಅಳವಡಿಸಲಾಗಿದೆ.
ಇನ್ನು ಮಂಗಳೂರಿನಲ್ಲಿ ವಿದ್ಯುತ್ ಚಿತಾಗಾರ ಬಳಕೆ ಹೆಚ್ಚಾಗುತ್ತಿರುವ ಕಾರಣ, ಭವಿಷ್ಯದಲ್ಲಿ ಜಾಗದ ಕೊರತೆ ಸೃಷ್ಟಿಯಾಗಲ್ಲ ಎನ್ನಲಾಗಿದೆ. ಆದರೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಧಪನ್ ಮಾಡುವುದರಿಂದ ಜಾಗದ ಕೊರತೆ ಸೃಷ್ಟಿಯಾಗುತ್ತಿದೆ. ಇದಕ್ಕಾಗಿ ಮಸೀದಿ ಮತ್ತು ಚರ್ಚ್ಗಳ ವ್ಯಾಪ್ತಿಯಲ್ಲಿ ಹೊಸ ಭೂಮಿ ನೀಡುವಂತೆ ಸಮುದಾಯದವರು ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಗೌರವಯುತ ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆ ಸೃಷ್ಟಿಯಾಗದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೋಡಿಕೊಳ್ಳಬೇಕಿದೆ.