ಕರ್ನಾಟಕ

karnataka

ETV Bharat / state

ರಮೇಶ್ -ಡಿಕೆಶಿ ನಡುವೆ ಜಿದ್ದು.. ಇಬ್ಬರಲ್ಲಿ ಒಬ್ಬರ ರಾಜಕೀಯ ಭವಿಷ್ಯ ಮಸುಕು ಸಾಧ್ಯತೆ!?

ಈ ಸಿಡಿ ಪ್ರಕರಣದ ಹಿಂದಿನ ರೂವಾರಿ ಡಿಕೆಶಿ ಅವರೇ ಎಂದು ರಮೇಶ್ ಆರೋಪಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ, ರಾಜಕೀಯವಾಗಿ ಬೆಳೆಯಲು ಶಿವಕುಮಾರ್​ಗೆ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ. ಅದೇ ರೀತಿ ಸಿಡಿ ಪ್ರಕರಣದ ಸಂತ್ರಸ್ತೆ ಯುವತಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದರೆ, ಅದೂ ಸಹ ರಮೇಶ್​ಗೆ ಮುಳುವಾಗುವ ಸಾಧ್ಯತೆ ಇದೆ..

ರಮೇಶ್ -ಡಿಕೆಶಿ ನಡುವೆರಮೇಶ್ -ಡಿಕೆಶಿ ನಡುವೆ ಹೋರಾಟ ಹೋರಾಟ
ರಮೇಶ್ -ಡಿಕೆಶಿ ನಡುವೆ ಹೋರಾಟ

By

Published : Mar 29, 2021, 8:34 PM IST

ಬೆಂಗಳೂರು :ತಿಂಗಳ ಹಿಂದೆ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವಿನ ಬಿಗ್ ಫೈಟ್​ಗೆ ವೇದಿಕೆಯಾಗಿ ಮಾರ್ಪಟ್ಟಿದೆ.

ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರಲ್ಲಿ ರಮೇಶ್ ಜಾರಕಿಹೊಳಿ ಪ್ರಯತ್ನ ಸಹ ದೊಡ್ಡದಿತ್ತು. ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಿಂದಲೂ ರಮೇಶ್ ಜಾರಕಿಹೊಳಿ ರೆಬೆಲ್ ನಾಯಕನ ರೀತಿಯಲ್ಲೇ ಕಾಣಿಸಿದ್ದರು.

ಅಂತಿಮವಾಗಿ ಸರ್ಕಾರದ ಪತನದಲ್ಲಿ ಪ್ರಮುಖವಾಗಿ ಗೋಚರಿಸಿದರು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಂದರ್ಭದಲ್ಲೆಲ್ಲ ಡಿ ಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಅಂತರ ಹೆಚ್ಚಾಗುತ್ತಾ ಸಾಗಿತ್ತು.

ಒಂದೇ ಪಕ್ಷದಲ್ಲಿದ್ದು, ಇಬ್ಬರು ಪ್ರತ್ಯೇಕ ಶಕ್ತಿಕೇಂದ್ರಗಳ ರೀತಿ ಗುರುತಿಸಿಕೊಂಡಿದ್ದರು. ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾದ ನಂತರ ರಮೇಶ್ ಜಾರಕಿಹೊಳಿ ಸಹ ತಮ್ಮ ಪ್ರಭಾವ ಬಳಸಿ ಹಿಂದೆ ಡಿ ಕೆ ಶಿವಕುಮಾರ್ ನಿರ್ವಹಿಸಿದ್ದ ಜಲಸಂಪನ್ಮೂಲ ಇಲಾಖೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಅಲ್ಲದೆ ಡಿ ಕೆ ಶಿವಕುಮಾರ್ ವಾಸವಾಗಿರುವ ಸದಾಶಿವನಗರ ನಿವಾಸದ ಹಿಂಭಾಗದ ರಸ್ತೆಯಲ್ಲಿ ತಮ್ಮ ಮನೆ ಮಾಡಿಕೊಂಡು ವಾಸ್ತವ್ಯ ಹೂಡಿದ್ದರು. ಇಬ್ಬರ ನಡುವೆಯೂ ನಾನಾ-ನೀನಾ ಎನ್ನುವ ಹೋರಾಟ ಆರಂಭವಾಗಿತ್ತು.

ಓದಿ:ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿ ರಕ್ಷಣೆಗೆ 8 ಸದಸ್ಯರ ತಂಡ ರಚನೆ

ಇಬ್ಬರ ನಡುವಿನ ಹೋರಾಟಕ್ಕೆ ಇನ್ನೊಂದು ಸ್ವರೂಪ ನೀಡಿದೆ ಈ ಸಿಡಿ ಪ್ರಕರಣ. ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯ ಅಲ್ಲಾಡಿಸುವ ಸೂಚನೆಯನ್ನು ಇದು ಆರಂಭದ ದಿನದಲ್ಲಿ ನೀಡಿತ್ತು. ಉತ್ತರಕರ್ನಾಟಕ ಭಾಗದ ಪ್ರಭಾವಿ ರಾಜಕೀಯ ನಾಯಕ ಎನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಭವಿಷ್ಯವೇ ಮುಗಿಯಿತು ಎಂದು ಅವರು ಭಾವಿಸಿದ್ದರು. ಅದಕ್ಕೆ ಪೂರಕವೆಂಬಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಮೇಶ್ ಜಾರಕಿಹೊಳಿ ನೇಪಥ್ಯಕ್ಕೆ ಸರಿದಿದ್ದರು.

ಎಲ್ಲವೂ ಮುಗಿಯಿತು ಅಂದುಕೊಳ್ಳುವ ಸಂದರ್ಭದಲ್ಲಿಯೇ ರಮೇಶ್ ಜಾರಕಿಹೊಳಿ ಸಂಪೂರ್ಣ ಘಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಾರಣ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ತಮ್ಮ ಬಳಿ ದಾಖಲೆಗಳು ಇವೆ ಎಂದು ರಮೇಶ್ ಹೇಳಿದ್ದಾರೆ.

ಪ್ರತಿಕ್ರಿಯೆ ನೀಡದ ಡಿಕೆಶಿ :ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದು, ಇದಕ್ಕೆ ಡಿಕೆಶಿ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ಡಿಕೆಶಿ ರಾಜಕೀಯಕ್ಕೆ ನಾಲಾಯಕ್ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡುವ ಕಾರ್ಯ ಶಿವಕುಮಾರ್​ರಿಂದ ಆಗಿಲ್ಲ.

ಒಂದಿಷ್ಟು ದಾಖಲೆಗಳು ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಇಬ್ಬರ ನಡುವಿನ ಹೋರಾಟ ಮುಂದುವರಿದಿದೆ. ಇದು ಯಾವ ರೀತಿಯ ತಾರ್ಕಿಕ ಅಂತ್ಯ ಕಾಣಲಿದೆ ಎಂಬುದು ತಿಳಿಯುತ್ತಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ಡಿ ಕೆ ಶಿವಕುಮಾರ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಸಿಡಿ ಪ್ರಕರಣದ ಹಿಂದಿನ ರೂವಾರಿ ಡಿಕೆಶಿ ಅವರೇ ಎಂದು ರಮೇಶ್ ಆರೋಪಿಸುತ್ತಿದ್ದಾರೆ.

ಇದಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ, ರಾಜಕೀಯವಾಗಿ ಬೆಳೆಯಲು ಶಿವಕುಮಾರ್​ಗೆ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ. ಅದೇ ರೀತಿ ಸಿಡಿ ಪ್ರಕರಣದ ಸಂತ್ರಸ್ತೆ ಯುವತಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದರೆ, ಅದೂ ಸಹ ರಮೇಶ್​ಗೆ ಮುಳುವಾಗುವ ಸಾಧ್ಯತೆ ಇದೆ. ಈ ಸಿಡಿ ಪ್ರಕರಣ ಡಿ ಕೆ ಶಿವಕುಮಾರ್ ಇಲ್ಲವೇ ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯವನ್ನು ಅಲ್ಲಾಡಿಸುವ ಸಾಧ್ಯತೆಯೂ ಇದೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ.

ABOUT THE AUTHOR

...view details