ಬೆಂಗಳೂರು :ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಾಮಾನ್ಯವಾಗಿದೆ. ಯಾರಾದರೂ ಪಾರ್ಶ್ವವಾಯುವಿಗೆ ತುತ್ತಾದರೆ ಪ್ರತಿ ಸೆಕೆಂಡ್ ಕೂಡ ಬಹಳ ಮಹತ್ವದಾಗಿರುತ್ತದೆ. ಸೂಕ್ತ ಸಮಯದಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಿಂದ ಚಿಕಿತ್ಸೆ ದೊರಕಿದರೆ ಅಪಾಯದಿಂದ ಪಾರಾಗಬಹುದು ಎಂದು ಆಸ್ಪತ್ರೆಯ ಮುಖ್ಯ ನ್ಯೂರೋಸರ್ಜನ್ ಹಾಗೂ ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಚ್.ವಿ ಮಧುಸೂದನ್ ತಿಳಿಸಿದರು.
ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಪ್ರತಿದಿನ 1ರಿಂದ 6 ಮಂದಿ ಪಾರ್ಶ್ವವಾಯುಗೆ ತುತ್ತಾಗುತ್ತಿದ್ದಾರೆ. ಮೆದುಳಿನ ಪಾರ್ಶ್ವವಾಯು ಸಾವಿಗೆ ದೂಡುವ ಎರಡನೇ ಪ್ರಮುಖ ಕಾರಣವಾಗಿದೆ ಮತ್ತು ಅಂಗವೈಕಲ್ಯದ ಮೂರನೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 18 ಲಕ್ಷ ಜನರು ಸ್ಟ್ರೋಕ್ಗೆ ಒಳಗಾಗುತ್ತಾರೆ. ಸ್ಟ್ರೋಕ್ ಬಂದಾಗ ತಕ್ಷಣ ಗುರುತಿಸಿ ಆಸ್ಪತ್ರೆಗೆ ಕರೆದೊಯ್ಯುಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಿದರೆ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಹೇಳಿದರು.
ಬಲಗೈ ಸ್ವಾಧೀನ ಕಳೆದುಕೊಂಡಿದ್ದ 102 ವರ್ಷದ ರಾಮಸ್ವಾಮಿ ಎಂಬುವರನ್ನು ಮೂರು ದಿನಗಳ ಹಿಂದೆ ದಾಖಲಿಸಲಾಗಿತ್ತು. ಅರ್ಧ ಗಂಟೆಯೊಳಗಡೆ ಶೇಕಡಾ 50ರಷ್ಟು ತಮ್ಮ ಕೈಯನ್ನು ಎತ್ತುವಷ್ಟು ಸಮರ್ಥರಾದರು. ಹಾಗೆಯೇ, ಒಂದು ಗಂಟೆಯೊಳಗಡೆ ಶೇಕಡಾ 90ರಷ್ಟು ತಮ್ಮ ಕೈಯನ್ನು ಎತ್ತಿ ಅಪಾಯದಿಂದ ಪಾರಾಗಿದ್ದಾರೆ. ಈಗ ಹಾಡನ್ನು ಹಾಡುವಷ್ಟು ಅವರು ಗುಣಮುಖರಾಗಿದ್ದಾರೆ ಎಂದರು.
ಇದನ್ನೂ ಓದಿ:ದೀರ್ಘಕಾಲದ ಕೋವಿಡ್ನಿಂದ ಹೃದಯಾಘಾತ, ಪಾರ್ಶ್ವವಾಯು ಹೆಚ್ಚಳ: ಅಧ್ಯಯನ ವರದಿ
ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವ ಸ್ಟ್ರೋಕ್ ದಿನವನ್ನು ಆಚರಿಸಲಾಗುತ್ತದೆ. ಹೊಸದೊಂದು ವಿಷಯದ ಮೂಲಕ ಪ್ರತಿ ವರ್ಷ ಪಾರ್ಶ್ವವಾಯು ಕುರಿತು ಜನರಿಗೆ ಅರಿವು ಮೂಡಿಸುತ್ತಿರುವ ವಲ್ಡ್ ಸ್ಟ್ರೋಕ್ ಆರ್ಗನೈಸೇಶನ್ (ಡಬ್ಲ್ಯುಎಸ್ಒ) ಈ ಬಾರಿ 'ಅಮೂಲ್ಯ ಸಮಯ' ಥೀಮ್ನೊಂದಿಗೆ ವಿಶ್ವ ಪಾರ್ಶ್ವವಾಯು ದಿನದ ಜಾಗೃತಿಯನ್ನು ಉತ್ತೇಜಿಸಲಿದೆ ಎಂದು ಹೇಳಿದರು.