ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ-ಹೊರಗುತ್ತಿಗೆ ನೌಕರರ ವೇತನ ಹೆಚ್ಚಳಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಆರೋಗ್ಯ ವಿಮೆ ವಿಸ್ತರಿಸಲು ಕೂಡ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುತ್ತಿರುವ ಗುತ್ತಿಗೆ-ಹೊರಗುತ್ತಿಗೆ ನೌಕರರನ್ನು ಭೇಟಿಯಾಗಿ ಸಚಿವರು ಚರ್ಚೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಇತಿಮಿತಿಯೊಳಗೆ ಎಲ್ಲಾ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲಿ ಈಡೇರಿಸಲಾಗುವುದು. ಶ್ರೀನಿವಾಸಾಚಾರಿಯವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ನೌಕರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುತ್ತದೆ : ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಖಾಯಂ ನೌಕರರಿಗೆ ಕೊಡುವಷ್ಟೇ ವೇತನವನ್ನು ತಮಗೂ ಕೊಡಬೇಕು ಎಂದು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 49 ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದ ತನಕ ಮಾಡಲಿವೆ. ಹೀಗಾಗಿ ಅವರನ್ನು ಖಾಯಂ ನೌಕರರನ್ನಾಗಿ ಮಾಡಿಕೊಳ್ಳಲು ಕೆಲವು ಅಡಚಣೆಗಳಿವೆ. ಅಷ್ಟೇ ಅಲ್ಲದೆ, ಖಾಯಂ ನೌಕರರಂತೆ ಸಮಾನ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಈಗಿರುವ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.