ಬೆಂಗಳೂರು: ರಾಜ್ಯದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಇರುವ ಕಠಿಣ ಕ್ರಮಗಳಂತೆಯೇ ದೇವದಾಸಿ ಪದ್ದತಿಯ ಆಚರಣೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಅನುಷ್ಠಾನದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಹಾಲಪ್ಪ ಆಚಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ "ಮಾಜಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆಗಳ ಹಾಗೂ ಅವುಗಳಿಗೆ ಇರುವ ಪರಿಹಾರಗಳ" ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗುತ್ತಿದೆ. ಯಾವುದೇ ಬಾಲ್ಯವಿವಾಹ ನಡೆದಾಗ ಅದರಲ್ಲಿ ಭಾಗಿಯಾಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಇದರಿಂದ ಬಾಲ್ಯವಿವಾಹದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಪರಿಣಾಮಾಕಾರಿಯಾಗಿ ಕಡಿಮೆ ಆಗಿದೆ. ಆದರೆ, ದೇವದಾಸಿ ಪದ್ದತಿಗೆ ಇನ್ನು ಹಲವು ಮಹಿಳೆಯರನ್ನು ಕಾನೂನುಬಾಹಿರವಾಗಿ ತಳ್ಳಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇರುವ ಕಾನೂನಿನ ಕಟ್ಟುನಿಟ್ಟಿನ ಬಳಕೆ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಬಾಲ್ಯ ವಿವಾಹ ತಡೆಗಟ್ಟಲು ಇರುವ ಕಠಿಣವಾದ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇವದಾಸಿ ಪದ್ದತಿಯ ನಿಷೇಧದ ಬಗ್ಗೆ, ಕಾನೂನು ಬಾಹಿರವಾಗಿ ಮಹಿಳೆಯರನ್ನು ದೇವದಾಸಿಯನ್ನಾಗಿಸುವವರ ವಿರುದ್ದ ಕೈಗೊಳ್ಳುವ ಕಠಿಣ ಶಿಕ್ಷೆಯ ಬಗ್ಗೆ, ದೇವದಾಸಿ ಪದ್ದತಿಗೆ ಒಳಗಾಗುತ್ತಿರುವವರ ರಕ್ಷಣೆಗೆ ಇರುವ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.