ಬೆಂಗಳೂರು: ಅರಣ್ಯ, ಸಸ್ಯಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲದ ಸಂರಕ್ಷಣೆಯೇ ಅರಣ್ಯ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಯಾರೇ ಅಕ್ರಮವಾಗಿ ಮರ ಕಡಿದರೂ, ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅರಣ್ಯನಾಶ ಮತ್ತು ವನ್ಯ ಮೃಗಗಳ ಸಾವು, ಮಾನವ- ವನ್ಯಮೃಗಗಳ ನಡುವಿನ ಸಂಘರ್ಷದ ವಿಚಾರ ಬಹಳ ಗಂಭೀರವಾದದ್ದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು, ಕಳೆದ ಒಂದು ತಿಂಗಳಲ್ಲಿ ನೀವು ಅದನ್ನು ನೋಡಿದ್ದೀರಿ ಎಂದು ಹೇಳಿದರು.
ಅರಣ್ಯಕ್ಕೆ ಎದುರಾಗುವ ಪ್ರಮುಖ ಆಪತ್ತು ಕಾಡ್ಗಿಚ್ಚು. ಈ ಕಾಡ್ಗಿಚ್ಚು ಉದ್ದೇಶಪೂರ್ವಕವಾದದ್ದೋ, ಸ್ವಾಭಾವಿಕವಾದದ್ದೋ ಎಂಬುದು ಮುಖ್ಯವಾಗುತ್ತದೆ. ಕೆಲವೆಡೆ ಮರ ಕಡಿದು ಬುಡಕ್ಕೆ ಬೆಂಕಿ ಹಚ್ಚಿ, ಜೆಸಿಬಿಯಿಂದ ಭೂಮಿ ಮಟ್ಟ ಮಾಡಿ ಅರಣ್ಯ ಭೂಮಿ ಕಬಳಿಸಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾನವ ಮತ್ತು ಕಾಡು ಮೃಗಗಳ ನಡುವಿನ ಸಂಘರ್ಷ ಕೂಡ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವನ್ಯಮೃಗ ದಾಳಿಯಿಂದ 51 ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ ಎಂದು ನನಗೆ ತಿಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 6 ಸಾವಿರ 30 ಆನೆ ಇದೆ ಎಂದು ಅಂದಾಜು ಮಾಡಲಾಗಿದೆ. ಮನುಷ್ಯರ ಜೀವ ಅಮೂಲ್ಯವಾಗಿದ್ದು, ಅರಣ್ಯ ಇಲಾಖೆ ಜನರಪರ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು. ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚು. ರಾಜ್ಯದಲ್ಲಿ ಸುಮಾರು 641 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ 310 ಕಿ.ಮೀ. ಪೂರ್ಣವಾಗಿದೆ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಲು ಒಂದೂವರೆ ಕೋಟಿ ವೆಚ್ಚವಾಗುತ್ತದೆ. ಉಳಿದ ಕಾಮಗಾರಿ ಮಾಡಲು ಬಜೆಟ್ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ. 3 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಂಪಾ ನಿಧಿ ಬಳಸಿಕೊಂಡು ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಅರಣ್ಯ ಸಚಿವರಿಗೆ ಕೆಲವು ತಪ್ಪು ಕಲ್ಪನೆ ಇದೆ. ಇದನ್ನು ಇತ್ತೀಚೆಗೆ ನಾನು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಹರಿಸಲು ಪ್ರಯತ್ನಿಸಿದ್ದೇವೆ. ಬ್ಯಾರಿಕೇಡ್ ನಿರ್ಮಾಣಕ್ಕೆ ಏಕೆ ಇಷ್ಟು ವೆಚ್ಚ ಮಾಡುತ್ತೀರಿ ಎಂಬುದು ಅವರ ಪ್ರಶ್ನೆಯಾಗಿದೆ. ಆದರೆ ಮಾನವನ ಜೀವ ಅಮೂಲ್ಯವಾದದ್ದು, ಎಷ್ಟೇ ಹಣ ಕೊಟ್ಟರೂ ಅದು ಮರಳಿ ಬರುವುದಿಲ್ಲ. ನಾವು ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆದರೆ ಈ ಅಮೂಲ್ಯ ಜೀವ ಉಳಿಸಬಹುದು ಎಂದು ಅವರಿಗೆ ಮನವರಿಕೆ ಮಾಡಿಸಿದ್ದೇನೆ ಎಂದು ವಿವರಿಸಿದರು.
ಖಾಲಿ ಹುದ್ದೆ ಭರ್ತಿ: ಇಲಾಖೆಯಲ್ಲಿ ಖಾಲಿ ಇರುವ 335 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ಪಡೆದು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿಯ ಅಗತ್ಯವಿಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗೆ ಜಂಟಿ ಸರ್ವೆ ಪರಿಹಾರವಾಗಿದೆ. ಭೂಮಾಪಕರ ಕೊರತೆಯಿಂದ ಇದು ತಡವಾಗಿದೆ. ಅಧಿವೇಶನದ ವೇಳೆ ಕಂದಾಯ ಸಚಿವರೊಂದಿಗೆ ಸಭೆ ನಡೆಸಿ, ಖಾಸಗಿ ಭೂಮಾಪಕರ ನೆರವು ಪಡೆದು 6 ತಿಂಗಳೊಳಗೆ ಜಂಟಿ ಸರ್ವೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದ ಸಚಿವರು, ರಾಜ್ಯದಲ್ಲಿ 1 ಲಕ್ಷ 2 ಸಾವಿರ ಹೆಕ್ಟೇರ್ ಹಸಿರು ವ್ಯಾಪ್ತಿ (ಗ್ರೀನ್ ಕವರ್) ಹೆಚ್ಚಳವಾಗಿದೆ ಎಂದು ಭಾರತೀಯ ಅರಣ್ಯ ಸಮೀಕ್ಷಾ ವರದಿ ಹೇಳಿದೆ. ಪ್ರಸ್ತುತ ರಾಜ್ಯದಲ್ಲಿ ಶೇ.21ರಷ್ಟು ಹಸಿರು ವ್ಯಾಪ್ತಿ ಇದ್ದು, ಇದನ್ನು ಶೇ.33ಕ್ಕೆ ಹೆಚ್ಚಿಸುವುದು ತಮ್ಮ ಗುರಿ ಎಂದು ಹೇಳಿದರು.
ವನಮಹೋತ್ಸವ: ಜುಲೈ 1ರಿಂದ 7ರ ವರೆಗೆ ರಾಜ್ಯಾದ್ಯಂತ ವನಮಹೋತ್ಸವ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ 1 ಕೋಟಿ ಸಸಿ ನೆಡಲು ತೀರ್ಮಾನಿಸಲಾಗಿದೆ. ಈ ವರ್ಷ 5 ಕೋಟಿ ಸಸಿ ನೆಟ್ಟು ಪೋಷಿಸಲಾಗುವುದು. ಕಳೆದ 3 ವರ್ಷದಲ್ಲಿ ನೆಟ್ಟ ಗಿಡಗಳ ಪೈಕಿ ಶೇ.50-60ರಷ್ಟು ಉಳಿದಿವೆ ಎಂದು ತಿಳಿಸಲಾಗಿದೆ. ಈ ಬಾರಿ ನೆಡಲಾಗುವ ಸಸಿಗಳ ಜಿಯೋ ಟ್ಯಾಗ್ ಮಾಡಲಾಗುತ್ತಿದ್ದು, ಕನಿಷ್ಠ ಶೇ.80ರಷ್ಟು ಸಸಿ ಉಳಿಸಲು ಪ್ರಯತ್ನಿಸಲಾಗುವುದು ಎಂದರು.
ಇದನ್ನೂ ಓದಿ:Leopard in Tumkur: ಒಂದೇ ಕಡೆ ಏಕಾಏಕಿ ಮೂರು ಚಿರತೆಗಳು ಪ್ರತ್ಯಕ್ಷ.. ಬೆಚ್ಚಿ ಬಿದ್ದ ತುಮಕೂರು ಮಂದಿ