ಕರ್ನಾಟಕ

karnataka

ETV Bharat / state

ಬಿಬಿಎಂಪಿ ಫುಟ್ ಪಾತ್ ವ್ಯಾಪಾರಿಗಳ ತೆರವಿಗೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಯ ಇಕ್ಕೆಲಗಳ ಫುಟ್ ಪಾತ್ ಅನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು, ಅದರ ತೆರವಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್​
ಡಿಸಿಎಂ ಡಿಕೆ ಶಿವಕುಮಾರ್​

By

Published : Jul 31, 2023, 8:17 PM IST

ಬೆಂಗಳೂರು :ನಗರದಲ್ಲಿಫುಟ್ ಪಾತ್ ವ್ಯಾಪಾರಿಗಳು ಜನರಿಗೆ ಓಡಾಡುವ ರಸ್ತೆಯನ್ನು ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಜನರಿಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತಗಳು ಆಗುತ್ತಿವೆ. ನಾನೇನು ವ್ಯಾಪಾರಿಗಳ ವಿರೋಧಿ ಅಲ್ಲ. ಆದರೆ ಜನರಿಗೆ ಓಡಾಡಲು ಬಿಟ್ಟು ವ್ಯಾಪಾರ ಮಾಡಿಕೊಳ್ಳಲಿ. ಬೆಂಗಳೂರಿನ ಫುಟ್ ಪಾತ್ ಕ್ಲಿಯರ್ ಮಾಡುತ್ತಿದ್ದೇವೆ. ಬಿಬಿಎಂಪಿ ಅಧಿಕಾರಿಗಳಿಗೆ ಪಾಲಿಸಿ ಬಗ್ಗೆ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದೇನೆ. ಪಾಲಿಸಿ ಬಿಟ್ಟು ಅಧಿಕಾರಿಗಳು ಮಾಧ್ಯಮಗಳಿಗೆ ಮಾತನಾಡಬಹುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ತಿಳಿಸಿದರು.

ನಗರದ ಹೊರವಲಯದಲ್ಲಿ ಉದ್ದೇಶಿತ ವರ್ತುಲ ರಸ್ತೆ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳಲಿರುವ ಮಾಲೀಕರು ಹಾಗೂ ರೈತರ ಜತೆ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಸೋಮವಾರ ಸಂವಾದ ನಡೆಸಿ, ಅಹವಾಲು ಆಲಿಸಿದರು. ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ ನಾಯಕ್, ಜಿಲ್ಲಾಧಿಕಾರಿ ದಯಾನಂದ, ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್, ಭೂಸ್ವಾಧೀನ ಉಪ ಆಯುಕ್ತೆ ಸೌಜನ್ಯ ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, 18 ವರ್ಷದಿಂದ ಪೆರಿಫೆರಲ್ ರಸ್ತೆ ನೆನೆಗುದಿಗೆ ಬಿದ್ದಿದೆ. ಅನೇಕ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಂಡಿದೆ. ಕೋರ್ಟ್ ಆದೇಶ ಕೂಡ ಕೊಟ್ಟಿದೆ. ರೈತರಿಗೆ ಸಹಾಯ ಆಗುತ್ತಿಲ್ಲ. ರೈತರು ಎನ್​ಒಸಿ ಕೇಳುತ್ತಿದ್ದು, ಕೊಡುವುದಕ್ಕೆ ಆಗಲ್ಲ ಅಂತ ಹೇಳಿದ್ದೇವೆ. ನನ್ನ ಕಾಲದಲ್ಲಿ ಡಿನೊಟಿಫಿಕೇಷನ್ ಮಾಡಲು ಆಗಲ್ಲ. 2013ರ ಕಾಯ್ದೆ ಪ್ರಕಾರ ಪರಿಹಾರ ಕೇಳಿದ್ದಾರೆ. ಇದರ ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡುತ್ತೇನೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಆರಂಭಕ್ಕೆ ಚಾಲನೆ ಕೊಡುತ್ತೇವೆ. ಹಾಗು 24 ಗಂಟೆ ಹೋಟೆಲ್‌ಗಳಿಗೆ ವ್ಯಾಪಾರ ಮಾಡಲು ಬಿಡುವ ಬಗ್ಗೆ ಮುಂದೆ ನೋಡಿ ತೀರ್ಮಾನಿಸುತ್ತೇವೆ ಎಂದು ಹೇಳಿದರು. ಬಳಿಕ ಸಿಬಿಐ ಕೇಸ್ ಸುಪ್ರೀಂ ಕೋರ್ಟ್ ವಜಾ ಮಾಡಿದ ವಿಚಾರ ಮಾತನಾಡಿ, ನನಗೆ ಇನ್ನು ಪೂರ್ತಿ ಮಾಹಿತಿ ಇಲ್ಲ. ನ್ಯಾಯದ ಮೇಲೆ ನಂಬಿಕೆ ಇಟ್ಟವನು ನಾನು. ಪೂರ್ತಿ ವಿಚಾರ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

ದೆಹಲಿಗೆ ಹೋಗುವ ವಿಚಾರ : ಹಿಂದೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಬಂದಾಗ ದೆಹಲಿಗೆ ಹೋಗುವ ನಿರ್ಧಾರ ಆಗಿತ್ತು. ಉಮ್ಮನ್ ಚಾಂಡಿ ನಿಧನ ಹಿನ್ನೆಲೆ ಎಲ್ಲಾ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಕ್ಯಾಂಡಿಡೇಟ್​ಗಳ ಆಯ್ಕೆ ಸಂಬಂಧ ಚರ್ಚೆ ಮಾಡಲಿದ್ದೇವೆ. ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತರುವ ಕ್ರಮ ಆಗಿದೆ. ಸಲಹೆಗಳನ್ನು ಕೇಳುತ್ತೇವೆ. ಎರಡು ಮೂರು ಸಭೆ ಇದ್ದು, ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ವಿವರಿಸಿದರು. ಕೋರ್ ಕಮಿಟಿ ರಚನೆ ಮಾಡುವ ವಿಚಾರ ಮಾತನಾಡಿ, ನಾನೇ ಇದ್ದೇನಲ್ಲ ಸರ್ಕಾರ ಮತ್ತು ಪಕ್ಷದಲ್ಲಿ. ಸಿಎಂ ಸಿದ್ದರಾಮಯ್ಯ ಕೂಡ ಎರಡು ಕಡೆ ಇದ್ದಾರೆ. ಮತ್ತೆ ಏಕೆ ಸಮನ್ವಯ ಸಮಿತಿ ಮಾಡಬೇಕು. ಯಾವುದೇ ಸಮನ್ವಯ ಸಮಿತಿ ರಚನೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ :ಕೆಲವು ಬಾರಿ ಸಮೀಕ್ಷೆ ಉಲ್ಟಾ ಆಗುತ್ತೆ, ಕೆಲವೊಮ್ಮೆ ಸಕ್ಸಸ್ ಆಗುತ್ತೆ: ಗೃಹ ಸಚಿವ ಡಾ ಜಿ ಪರಮೇಶ್ವರ್

ABOUT THE AUTHOR

...view details