ಬೆಂಗಳೂರು : ಆನ್‌ಲೈನ್ ವೇದಿಕೆ ಮೂಲಕ ಸಾಲ ನೀಡಿ ಸಾರ್ವಜನಿಕರಿಗೆ ವಂಚಿಸುವ ಆ್ಯಪ್‌ಗಳ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ನಲ್ಲಿ ಗಮನ ಸೆಳೆಯುವ ಸೂಚನೆ ಅಡಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಮಟ್ಟದಲ್ಲಿ ಸಿಐಎನ್ ಪೊಲೀಸ್ ಠಾಣೆಗಳನ್ನು ತೆರೆದು, ಪೊಲೀಸ್ ಇನ್ಸ್‌ಪೆಕ್ಟರ್ ದರ್ಜೆ ಅಧಿಕಾರಿಯನ್ನು ಇದಕ್ಕಾಗಿಯೇ ನೇಮಿಸಲಾಗಿದೆ.
ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರ ವಹಿಸಲಿದೆ ಎಂದು ಭರವಸೆ ಕೊಟ್ಟರು. ವಿಧಾನಸಭೆ ವೇಳೆ ಡಿ.ಎಸ್ ಅರುಣ್ ಮಾತನಾಡಿ, ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಹಾವಳಿಗೆ ಯುವ ಸಮೂಹ ಬಲಿ, ಸಾರ್ವಜನಿಕರಿಗೆ ಆನ್‌ಲೈನ್ ಸಾಲದ ಕಿರುಕುಳದತ್ತ ಸರ್ಕಾರ ಗಮನ ಹರಿಸಬೇಕು ಎಂದರು. ಈ ಸಂದರ್ಭ ಗೃಹ ಸಚಿವರ ಪರವಾಗಿ ಸದನದಲ್ಲಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.
ಆನ್‌ಲೈನ್ ಮೂಲಕ ಸಾಲ ನೀಡಿ ಸಾರ್ವಜನಿಕರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ 42 ಬಗೆಯ ಆ್ಯಪ್‌ಗಳನ್ನು ಗೂಗಲ್ ಪ್ಲೇಟ್ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. ಗೂಗಲ್ ಸೇವಾ ಪೂರೈಕೆದಾರರಿಗೆ ಸಿಇಎನ್ ಪೊಲೀಸ್ ಠಾಣೆಯಿಂದ ಈ ಕುರಿತು ಇ-ಮೇಲ್ ಸಂದೇಶ ರವಾನಿಸಿದ್ದು, ತಕ್ಷಣ ಆ್ಯಪ್‌ಗಳನ್ನು ಗೂಗಲ್‌ನವರು ಡಿಲೀಟ್ ಮಾಡಿದ್ದಾರೆ ಎಂದು ಹೇಳಿದರು.
ಆನ್‌ಲೈನ್ ಗೇಮ್ ಆಡುವ ಹವ್ಯಾಸದಿಂದ ಯುವಜನರು, ವಿದ್ಯಾರ್ಥಿಗಳ ಜೀವನದ ಮೇಲೆ ದುಷ್ಪರಿಣಾಮ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಿತ್ತಿಪತ್ರ, ಜಾಥಾ, ಸಮೂಹ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಜಾಗೃತಿ ದಿವಸ ಆಚರಿಸಿ ವಂಚನೆಗೆ ಒಳಗಾಗದಂತೆ ಜನರಿಗೆ ಸಲಹೆ ನೀಡಲಾಗುತ್ತದೆ. ಜೊತೆಗೆ ಸಹಾಯವಾಣಿ (1930)ಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ದಿನದ 24 ತಾಸು ಹಣ ವಂಚನೆಯಾದ ಬಗ್ಗೆ ತುರ್ತು ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.