ಕರ್ನಾಟಕ

karnataka

ETV Bharat / state

ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ಗೃಹ ಸಚಿವರ ಎಚ್ಚರಿಕೆ

ಪ್ರಮುಖ ವ್ಯಕ್ತಿಗಳಿಗೆ ಜೈಲಿನ ಒಳಗಿರುವ ಕೈದಿಗಳಿಂದ ಬೆದರಿಕೆ ಕೆರಗಳು ಬರುತ್ತಿರುವ ಹಿನ್ನೆಲೆ ಕಾರಾಗೃಹದಲ್ಲಿ ಶಿಸ್ತಿನ ಕ್ರಮ ಪಾಲಿಸುವಂತೆ ಪೊಲೀಸ್​ ಅಧಿಕಾರಿಗಳಿಗೆ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.

Home minister meeting with Police officers
ವಿಕಾಸಸೌಧದಲ್ಲಿ ಪೊಲೀಸ್​ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ

By

Published : Jan 20, 2023, 7:24 PM IST

ಬೆಂಗಳೂರು: ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಹಾಗೂ ಕುಮ್ಮಕ್ಕು ನೀಡುವ ಕಾರಾಗೃಹ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತಿನ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇತ್ತೀಚೆಗೆ, ರಾಮನಗರ, ತುಮಕೂರು, ಕಲಬುರಗಿ ಹಾಗೂ ಬೆಳಗಾವಿ ಕಾರಾಗೃಹಗಳಲ್ಲಿ ಕೆಲವು ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಯಾಗಿದೆ. ಅವುಗಳ ಬಗ್ಗೆ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ ಎಂದರು.

ತುಮಕೂರು ಜಿಲ್ಲಾ ಕಾರಾಗೃಹ ವಾರ್ಡನ್ ಅಮಾನತು:ತುಮಕೂರು ಜಿಲ್ಲಾ ಕಾರಾಗೃಹದ ವಾರ್ಡನ್, ಪ್ರವೀಣ್ ಎಂಬವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಾಸನ ಜಿಲ್ಲಾ ಕಾರಾಗೃಹದ ಮೇಲೆ ನಿನ್ನೆ ಜಿಲ್ಲಾ ಪೊಲೀಸ್ ಸಿಬ್ಬಂದಿ ದಿಡೀರ್ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದ್ದ ಮೊಬೈಲ್ ಸೆಟ್​ಗಳನ್ನು ಸೀಜ್ ಮಾಡಿದ್ದಾರೆ. ಮೊಬೈಲ್​ಗಳನ್ನು ಜೈಲಿನೊಳಗೆ ಸಾಗಿಸಲು ಸಹಕರಿಸಿದ ಸಿಬ್ಬಂದಿ ಹಾಗೂ ಅದನ್ನು ಜೈಲಿನೊಳಗೆ ಉಪಯೋಗಿಸಿದ ಜೈಲಿನೊಳಗಿದ್ದ ಅಪರಾಧಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಬೆಳಗಾವಿ ಕೇಂದ್ರ ಕಾರಾಗೃಹದಿಂದ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ, ಬೆದರಿಕೆ ಕರೆ ಮಾಡಿದ ಕೈದಿಯ ವಿರುದ್ಧವೂ ಮೊಕದ್ದಮೆ ದಾಖಲು ಮಾಡಲಾಗಿದೆ. ರಾಜ್ಯದ ಕಾರಾಗೃಹಗಳಲ್ಲಿ ಅಕ್ರಮವಾಗಿ, ಮೊಬೈಲ್ ಉಪಯೋಗಿಸುವುದನ್ನು ಪ್ರತಿಬಂಧಿಸಲು ಅತ್ಯಾಧುನಿಕ ಮೊಬೈಲ್ ಜಾಮರ್​ಗಳನ್ನು ಅಳವಡಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾಂಗ್ರೆಸ್​ನ ಇನ್ನು ಕೆಲವು ನಾಯಕರು ಜೈಲಿಗೆ:ತಾವು ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ಜೈಲಿಗೆ ಕಳುಹಿಸುತ್ತೇವೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಒಬ್ಬ ಪ್ರತಿಪಕ್ಷದ ನಾಯಕರಾಗಿ ಸಿಲ್ಲಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿರುವ ಅನೇಕರು ಜೈಲಿನ ಒಳಗಿದ್ದಾರೆ. ಇನ್ನೂ ಅನೇಕರು ಜೈಲಿಗೆ ಹೋಗಲಿದ್ದಾರೆ ಎಂದು ತಿರುಗೇಟು ನೀಡಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಂದು ಮಾತು ಹೇಳಿದ್ರು. ನಾವು ಮೂರು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು. ತನಿಖೆ ಮಾಡಿದರೆ ಅನೇಕರು ಜೈಲಿಗೆ ಹೋಗಬೇಕಾಗಲಿದೆ. ಅದಕ್ಕಾಗಿ ಹೊಸ ಜೈಲನ್ನೇ ತೆರೆಯಬೇಕಾಗಲಿದೆ. ಅಲ್ಲಿರುವ ರೌಡಿಗಳು, ಸಮಾಜಘಾತಕ ಶಕ್ತಿಗಳು ಇವರ ಕಾಲದಲ್ಲಿ ಜೈಲನ್ನೇ ಗೆಸ್ಟ್ ಹೌಸ್ ಮಾಡಿಕೊಂಡಿದ್ದರು. ಈಗ ಸಾಮಾನ್ಯ ಜೈಲಾಗಿ ಉಳಿದಿದೆ. ಜೈಲಿನಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ಕಡಿವಾಣ ಹಾಕಿದ್ದೇವೆ ಎಂದು ಹೇಳಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂಡಲಗಾ ಜೈಲಿನಿಂದ ಕರೆ ಹೋಗಿದೆ. ಕರ್ನಾಟಕದ ಪೊಲೀಸರೇ ಅದನ್ನು ಕಂಡು ಹಿಡಿದಿದ್ದಾರೆ. ಆ ಬಗ್ಗೆ ಒಂದು ಎಫ್​ಐಆರ್ ಆಗಿದೆ. ಅದರ ತನಿಖೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಗಡ್ಕರಿ ಕಚೇರಿಗೆ ಜೀವ ಬೆದರಿಕೆ ಕರೆ ಮಾಡಿದ್ದ ಕೈದಿ ವಶ: ಸ್ಯಾಂಟ್ರೊ ರವಿ ಅಕ್ರಮ ತನಿಖೆ ಚುರುಕು: ಆರಗ ಜ್ಞಾನೇಂದ್ರ

ABOUT THE AUTHOR

...view details