ಬೆಂಗಳೂರು: ಬೆಳಗಾವಿಯಲ್ಲಿ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿಗಳು, "ಜೈನ ಮುನಿಗಳ ಹತ್ಯೆ ಖಂಡನೀಯ. ಇದನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರೂ ಪ್ರಚೋದನೆಗೆ ಒಳಗಾಗಬಾರದು, ಬೇರೆಯವರನ್ನು ಪ್ರಚೋದಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದರು.
ಇನ್ನು ಬೆಳಗಾವಿಯ ಗೊರೂರು ಮಠದ ಗುಣಾಧಾರನಂದಿ ಮಹಾರಾಜ ಸ್ವಾಮೀಜಿಗಳು ಸ್ವಾಮೀಜಿಗಳಿಗೆ ಭದ್ರತೆ ನೀಡಬೇಕು ಎಂದು ಅನ್ನ, ನೀರು ತ್ಯಜಿಸಿ ಪ್ರತಿಭಟನೆಗೆ ಮುಂದಾಗಿರುವ ಮಾಹಿತಿ ಬಂದಿದೆ. ಸ್ವಾಮೀಜಿಗಳಿಗೆ ಭದ್ರತೆ ನೀಡುವ ಕೆಲಸ ಮಾಡುತ್ತೇವೆ. ಕೂಡಲೇ ಅವರು ತಮ್ಮ ಪ್ರತಿಭಟನೆ ಕೈಬಿಡಬೇಕು. ನಾನು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯ ಶಾಸಕರು, ಮಂತ್ರಿಗಳ ಜೊತೆ ಈ ವಿಚಾರವಾಗಿ ಮಾತನಾಡಿದ್ದೇನೆ" ಎಂದು ತಿಳಿಸಿದರು.
ನಗರ ಪ್ರದಕ್ಷಿಣೆ : ನಗರ ಪ್ರದಕ್ಷಿಣೆ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿ, ಇಂದು ಅಧಿಕಾರಿಗಳಿಗೆ ಮಾಹಿತಿ ನೀಡದೆ ಇಂದಿರಾ ಕ್ಯಾಂಟೀನ್, ಘನತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿದ್ದೇನೆ. ಇಂದಿರಾ ಕ್ಯಾಂಟೀನ್ನಲ್ಲಿನ ಕೆಲವು ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಘನತ್ಯಾಜ್ಯ ಘಟಕಗಳಲ್ಲಿ ಪರಿಶೀಲನೆ ಮಾಡಿದ್ದು, ಅಲ್ಲಿನ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಮೊದಲು ಸರ್ಕಾರದ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ನಂತರ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದರು.
ಈ ಎಲ್ಲಾ ಸಂಸ್ಥೆಗಳ ಕಾರ್ಯವೈಖರಿ ಸರಿಯಾದ ಹಳಿಗೆ ತರಬೇಕು. ಮೊದಲು ಆ ಕೆಲಸ ಮಾಡುತ್ತೇವೆ. ಕಸದಿಂದ ಇಂಧನ ಉತ್ಪಾದನೆ ಮಾಡುವುದಾಗಿ ಹೇಳಿ ಜವಾಬ್ದಾರಿ ವಹಿಸಿಕೊಂಡವರು ಇಂಧನ ಉತ್ಪಾದನೆ ಮಾಡುತ್ತಿಲ್ಲ. ಇನ್ನು ಈ ಘಟಕಗಳ ಕಾರ್ಯವೈಖರಿ ಬಗ್ಗೆ ಜವಾಬ್ದಾರಿಯುತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ. ಬೆಂಗಳೂರು ನಗರ ಸ್ವಚ್ಛವಾಗಿ ಇಡಬೇಕು. ಆದರೆ ರಸ್ತೆ ಮಧ್ಯದಲ್ಲಿ ಕಸದ ರಾಶಿ ಇರುವ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಈ ಬಗ್ಗೆ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದೇನೆ. ಇದಕ್ಕೆ ಹೊಣೆಗಾರಿಕೆ ಯಾರು ಹೊರಬೇಕು ಎಂದು ಕೇಳಿದ್ದೇನೆ. ಈ ಮಧ್ಯೆ ಲಾರಿ ಮಾಲೀಕರ ಸಂಘದ ಜೊತೆ ಚರ್ಚೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದರು.
ಕಸಗಳನ್ನು ತಂದು ರಸ್ತೆಗೆ ಸುರಿಯುತ್ತಿರುವ ವಾಹನಗಳ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ಸಂಸ್ಕರಣ ಘಟಕಗಳ ಲೆಕ್ಕಾಚಾರದಲ್ಲಿ ಏರುಪೇರುಗಳಿವೆ. ಅದೆಲ್ಲವನ್ನೂ ಸರಿಪಡಿಸುತ್ತೇವೆ. ಘಟಕಕ್ಕೆ ಬರುವ ಪ್ರತಿ ಕಸದ ವಾಹನಗಳ ವಿಡಿಯೋ ದಾಖಲೆ ಮಾಡಿಸಿದ್ದೇನೆ. ಎಲ್ಲವೂ ಲೆಕ್ಕ ಸರಿಯಾಗಿ ಹೊಂದಾಣಿಕೆಯಾಗುತ್ತದೆಯೇ? ಎಂಬುದನ್ನು ನೋಡಬೇಕು ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಭೇಟಿ : ಇದಕ್ಕೂ ಮುನ್ನ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿದ್ದೆ. ಒಂದು ಕಡೆ 9 ಗಂಟೆಗೆ 200ಕ್ಕೂ ಹೆಚ್ಚು ಪ್ಲೇಟ್ ತಿಂಡಿ ಖಾಲಿ ಆಗಿತ್ತು. ಅಲ್ಲಿ ₹5ರ ಬದಲು ₹10 ರೂ. ಪಡೆಯಲಾಗಿದೆ. ಅಲ್ಲಿದ್ದ ಸಹಾಯವಾಣಿ ಸಂಖ್ಯೆ ದುರಸ್ತಿಯಲ್ಲಿತ್ತು. ಆದಷ್ಟು ಬೇಗ ಈ ಲೋಪದೋಷ ಸರಿಪಡಿಸಲಾಗುವುದು. ಎಲ್ಲಾ ಹಂತದಲ್ಲೂ ರಿಪೇರಿ ಮಾಡಲಾಗುವುದು. ಬೆಂಗಳೂರು ಅಭಿವೃದ್ಧಿಗೆ ಬಜೆಟ್ನಲ್ಲಿ ನಿರೀಕ್ಷೆಗೆ ತಕ್ಕ ಅನುದಾನ ಸಿಕ್ಕಿದೆಯೇ? ಎಂದು ಕೇಳಿದ ಪ್ರಶ್ನೆಗೆ, "ಬಜೆಟ್ನಲ್ಲಿ ಅನುದಾನ ಸಿಗುತ್ತದೆಯೋ ಇಲ್ಲವೋ. ನಾನು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿದೆ. ತೆರಿಗೆ ವಂಚನೆ ಮಾಡಲಾಗುತ್ತಿದೆ. ಯಾವ ತೆರಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ" ಎಂದು ತಿಳಿಸಿದರು.