ಕರ್ನಾಟಕ

karnataka

ETV Bharat / state

ಅಕ್ರಮ ಜಾಹೀರಾತುದಾರರ ವಿರುದ್ಧ 264 ಎಫ್​ಐಆರ್​​: ಹೈಕೋರ್ಟ್​ಗೆ ಮಾಹಿತಿ ನೀಡಿದ ಬಿಬಿಎಂಪಿ

ಅಕ್ರಮ ಜಾಹೀರಾತು ಅಳವಡಿಸಿದ್ದ ವ್ಯಕ್ತಿಗಳ ವಿರುದ್ಧ ಒಟ್ಟು 264 ಎಫ್​ಐಆರ್​​ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Aug 30, 2023, 10:45 PM IST

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಸೇರಿ ಅಕ್ರಮ ಜಾಹೀರಾತುಗಳ ಹಾವಳಿ ತಪ್ಪಿಸಲು ಪ್ರತಿ ಅಕ್ರಮ ಜಾಹೀರಾತು ಅಳವಡಿಕೆಗೆ 50 ಸಾವಿರ ರೂ ದಂಡ ವಿಧಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

ಅಲ್ಲದೆ, ಈ ಸಂಬಂಧ 50 ಸಾವಿರ ರೂ.ಗಳವರೆಗೂ ದಂಡ ವಿಧಿಸಲಾಗುತ್ತಿದೆ. ಅಕ್ರಮ ಜಾಹೀರಾತು ಅಳವಡಿಸಿದ್ದ ವ್ಯಕ್ತಿಗಳ ವಿರುದ್ಧ ಒಟ್ಟು 264 ಎಫ್‌ಐಆರ್​ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಮಾಯಿಗೇಗೌಡ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ನ್ಯಾಯಪೀಠಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿದ್ದ ಅನುಷ್ಠಾನ ವರದಿಯನ್ನು ಬಿಬಿಎಂಪಿ ಪರ ವಕೀಲರು ವಿವರಿಸಿದರು.

2023ರ ಆಗಸ್ಟ್ 2 ರಿಂದ ಒಟ್ಟು 923 ಅನಧಿಕೃತ ಫ್ಲೆಕ್ಸ್, ಬ್ಯಾನರ್​ಗಳು ಮತ್ತು ಇತರ ಅಕ್ರಮ ಜಾಹೀರಾತುಗಳನ್ನು ಗುರುತಿಸಲಾಗಿದೆ. 923 ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ. 369 ದೂರುಗಳನ್ನು ದಾಖಲಿಸಲಾಗಿದ್ದು, ಒಟ್ಟು 264 ಎಫ್‌ಐಆರ್ ದಾಖಲಾಗಿವೆ. ನಗರದಲ್ಲಿ ಅಕ್ರಮ ಜಾಹೀರಾತುಗಳ ಉಪಟಳ ನಿಯಂತ್ರಿಸಲು ಬಿಬಿಎಂಪಿ ಅಧಿಕಾರಿಗಳು ಹೊಸ ವಿಧಾನಗಳಡಿ ಮತ್ತು ಹೆಚ್ಚು ಕಟ್ಟುನಿಟ್ಟಾದ ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ಆ ಮೂಲಕ ಭವಿಷ್ಯದಲ್ಲಿ ಅನಧಿಕೃತ ಫ್ಲೆಕ್ಸ್​ಗಳು, ಬ್ಯಾನರ್​ಗಳನ್ನು ಅಕ್ರಮವಾಗಿ ಅಳವಡಿಸುವುದನ್ನು ಸಂಪೂರ್ಣವಾಗಿ ತಡೆಯಲು ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಿಬಿಎಂಪಿಯ ಎಂಟೂ ವಲಯಗಳ ವಿಶೇಷ ಆಯುಕ್ತರು ಮತ್ತು ವಲಯ ಆಯುಕ್ತರೊಂದಿಗೆ ಇದೇ 21 ರಂದು ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ. ನಿರ್ದಿಷ್ಟ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲು ವಾರ್ಡ್ ವಾರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಎಫ್‌ಐಆರ್​ಗಳು, ದಂಡ ವಿಧಿಸುವುದು ಮತ್ತು ಅನಧಿಕೃತ ಜಾಹೀರಾತುಗಳನ್ನು ತೆಗೆದುಹಾಕುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ನಂತರ ಎಫ್‌ಐಆರ್​ಗಳನ್ನು ದಾಖಲಿಸಲಾಗುತ್ತಿದೆ. ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಲಾಗಿದೆ ಎಂದು ತಿಳಿಸಿದರು.

ಹೈಕೋರ್ಟ್ ಏನು ಹೇಳಿತ್ತು?:ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸಲ್ಲಿಸಿದ್ದ ಅನುಪಾಲನಾ ವರದಿಯನ್ನು ಕಣ್ಣೊರೆಸುವ ತಂತ್ರ ಎಂದು ತಿಳಿಸಿತ್ತು. ಅನಧಿಕೃತ ಫ್ಲೆಕ್ಸ್, ಬ್ಯಾನರ್, ಧ್ವಜಗಳು, ಬಂಟಿಂಗ್ಸ್ ಸೇರಿದಂತೆ ಮುಂತಾದವುಗಳನ್ನು ತೆರವುಗೊಳಿಸುವ ಬಗ್ಗೆ ಕೇವಲ 134 ದೂರುಗಳನ್ನು ಪರಿಗಣಿಸಿ ಕೇವಲ 40 ಎಫ್‌ಐಆರ್​ಗಳನ್ನು ದಾಖಲಿಸಲಾಗಿದೆ ಎಂಬ ಅಂಶಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿತ್ತು. ನಗರದಲ್ಲಿ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡು ಬಂದರೆ ಪಾಲಿಕೆ ಮತ್ತು ರಾಜ್ಯ ಸರ್ಕಾರ ತಲಾ 50 ಸಾವಿರ ಠೇವಣಿ ಇರಿಸಬೇಕು ಎಂದು ನಿರ್ದೇಶಿಸಿತ್ತು. ಅದರಂತೆ ಇದೀಗ ಕ್ರಮಕ್ಕೆ ಮುಂದಾಗಿರುವುದಾಗಿ ಬಿಬಿಎಂಪಿ ತಿಳಿಸಿದೆ.

ಇದನ್ನೂ ಓದಿ:371ಜೆ ಅಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲು ಸೌಲಭ್ಯ ಸ್ಪಷ್ಟನೆ ಎತ್ತಿ ಹಿಡಿದ ಹೈಕೋರ್ಟ್

ABOUT THE AUTHOR

...view details