ಕರ್ನಾಟಕ

karnataka

ETV Bharat / state

ನಿಗದಿತ ಸಂಖ್ಯೆಯ ಬೆಡ್ ನೀಡದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ

ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವಲಯ ಉಸ್ತುವಾರಿಗಳಾಗಿರುವ ತಮಗೆ ಪೂರ್ಣ ಸ್ವಾತಂತ್ರ್ಯವಿದ್ದು, ವಿಳಂಬ ಮಾಡುವ ಆಸ್ಪತ್ರೆಗಳ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚಿಸಿ ಎಂದು ಸಭೆ ವೇಳೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Strict action against hospitals that do not offer a number of beds: Suresh Kumar
ನಿಗದಿತ ಸಂಖ್ಯೆಯ ಬೆಡ್ ನೀಡದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

By

Published : Jul 13, 2020, 9:44 PM IST

ಬೆಂಗಳೂರು: ಕೊರೊನಾ ರೋಗಿಗಳಿಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ ಖಾಸಗಿ ಆಸ್ಪತ್ರೆಗಳು ಇಲಾಖೆಗೆ ಒದಗಿಸಬೇಕಾದ ನಿಗದಿತ ಹಾಸಿಗೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು, ವಿಳಂಬ ಇದೇ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಗಳು ನಡೆಸಿದ ಬೆಂಗಳೂರು ವಲಯವಾರು ಪರಿಶೀಲನೆಯ ವಿಡಿಯೋ ಸಂವಾದದಲ್ಲಿ ಬೊಮ್ಮನಹಳ್ಳಿ ವಲಯದ ಕೊರೊನಾ ಉಸ್ತುವಾರಿಗೆ ನಿಯುಕ್ತಿಗೊಂಡಿರುವ ಸುರೇಶ್ ಕುಮಾರ್, ನಿನ್ನೆ ಖಾಸಗಿ ವಲಯದ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು, ತಕ್ಷಣವೇ ನಿಗದಿತ ಬೆಡ್ ಒದಗಿಸಬೇಕೆಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ವಲಯದ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1,261 ಬೆಡ್​​​ಗಳಿವೆ. ಅವುಗಳಲ್ಲಿ ನಿಗದಿತ ಸಂಖ್ಯೆಯ ಶೇ 50ರಷ್ಟು ಬೆಡ್​​​ಗಳನ್ನು ಒದಗಿಸಬೇಕಾಗಿದ್ದು, ಈತನಕ ಕೇವಲ 118 ಬೆಡ್​​ಗಳನ್ನಷ್ಟೇ ಇಲಾಖೆಗೆ ನೀಡಲಾಗಿದೆ.

ಸೋಂಕು ಏರುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಷಯಗಳಲ್ಲಿ ವಿಳಂಬಕ್ಕೆ ಅವಕಾಶವೇ ಇಲ್ಲ, ಏನಾದರೂ ವಿಳಂಬ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದಾಗಿ ಅವರು ಸಿಎಂ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ತಮ್ಮ ವಲಯಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವಲಯ ಉಸ್ತುವಾರಿಗಳಾಗಿರುವ ತಮಗೆ ಪೂರ್ಣ ಸ್ವಾತಂತ್ರ್ಯವಿದ್ದು, ವಿಳಂಬ ಮಾಡುವ ಆಸ್ಪತ್ರೆಗಳ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚಿಸಿ ಎಂದು ಸಲಹೆ ನೀಡಿದರು.

ಮೊದಲು ಸದರಿ ವಾರ್ಡ್​​ಗೆ 16 ಅಂಬ್ಯುಲೆನ್ಸ್​ಗಳ ಅಗತ್ಯವಿದ್ದು, ತಕ್ಷಣವೇ 10 ವಾಹನಗಳನ್ನು ಒದಗಿಸಬೇಕೆಂದು ಸಚಿವರು ಮನವಿ ಮಾಡಿದರು. ಕೋವಿಡ್ ಪರೀಕ್ಷಾ ಫಲಿತಾಂಶ ಬರಲು ಪ್ರಸ್ತುತ 4 ರಿಂದ 5 ದಿನಗಳಾಗುತ್ತಿವೆ. ಪರೀಕ್ಷಾ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡರೆ ಒಂದು ಇಲ್ಲವೇ ಎರಡು ದಿನಗಳಲ್ಲಿ ಪರೀಕ್ಷಾ ಫಲಿತಾಂಶ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ABOUT THE AUTHOR

...view details