ಕರ್ನಾಟಕ

karnataka

ETV Bharat / state

ಉರಿಯದ ಬೀದಿ ದೀಪಗಳು: ಕತ್ತಲಲ್ಲಿ ರಾಜ್ಯದ ನಗರಗಳು..! - ಹಗಲಲ್ಲಿ ಉರಿಯುತ್ತಿರುವ ಉರಿಯದ ಬೀದಿ ದೀಪಗಳು

ರಾಜ್ಯದ ಬಹುತೇಕ ಕಡೆಗಳಲ್ಲಿ ವಿದ್ಯುತ್ ದೀಪಗಳು ಇದ್ದೂ ಇಲ್ಲದಂತಾಗಿದ್ದು, ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾಗಿದೆ.

streetlights burning during the day
ಹಗಲಲ್ಲಿ ಉರಿಯುತ್ತಿರುವ ಉರಿಯದ ಬೀದಿ ದೀಪಗಳು

By

Published : Sep 25, 2020, 11:19 PM IST

ಬೆಂಗಳೂರು: ಮೂಲ ಸೌಕರ್ಯಗಳಲ್ಲಿ ಒಂದು ಬೀದಿ ದೀಪ. ಅವುಗಳ ನಿರ್ವಹಣೆ ಸಮರ್ಪಕವಾಗಿ ಇಲ್ಲದ ಕಾರಣ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬೀದಿ ದೀಪಗಳು ಉರಿಯುತ್ತಿಲ್ಲ. ಕಾರಣ ಜನರು ಕತ್ತಲಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಹುತೇಕ ಕಡೆಗಳಲ್ಲಿ ವಿದ್ಯುತ್ ದೀಪಗಳು ಇದ್ದೂ ಇಲ್ಲದಂತಾಗಿದೆ. ರಾತ್ರಿಯಾದರೆ ಬೀದಿ ದೀಪಗಳು ಉರಿಯದ ಕಾರಣ ಬೀದಿಯಲ್ಲಿ ಹಿಂಡಾಗಿ ತಿರುಗುವ ನಾಯಿ, ಗಿಡಗಂಟಿ ಬೆಳೆದಿರುವ ಕಡೆಯಲ್ಲಿ ಹಾವುಗಳ ಕಾಟ ಮುಂತಾದ ಸಮಸ್ಯೆಗಳ ನಡುವೆ ಓಡಾಡುವುದು ಕಷ್ಟವಾಗುತ್ತಿದೆ. ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾಗಿದೆ.

ಹಗಲಲ್ಲಿ ಉರಿಯುತ್ತಿರುವ ಉರಿಯದ ಬೀದಿ ದೀಪಗಳು

ಬಳ್ಳಾರಿ ಮಹಾನಗರದಕೊಳಚೆ ಪ್ರದೇಶ ಹಾಗೂ ಸ್ಲಂಗಳಲ್ಲಿ ವಾಸಿಸುತ್ತಿರುವ ಜನರು ಬೀದಿ ದೀಪಗಳಿಲ್ಲದೇ ನರಕಯಾತನೆ ಅನುಭವಿಸಿದ್ರೆ, ಮತ್ತೊಂದೆಡೆ ಬಡಾವಣೆ ಮತ್ತು ಕಾಲೊನಿಗಳಲ್ಲಿ ಬೀದಿ ದೀಪಗಳಿಗೆ ಬಲ್ಬು ಇದ್ದರೆ ಮೇಲ್ಪದರು ಇಲ್ಲದಂತಾಗಿದೆ. ಮೇಲ್ಪದರು ಇದ್ದರೆ ಒಳಗಡೆ ಬಲ್ಬು ಇರುವುದಿಲ್ಲ. ಮಹಾನಗರದಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಸಕಾಲದಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯವೇ ನಡೆಯುತ್ತಿಲ್ಲ. ಯಾರಾದ್ರೂ ಬಂದು ದೂರು ಸಲ್ಲಿಸಿದ್ರೆ ಸಾಕು,‌ ಇರುಸು-ಮುರುಸುಗೊಳ್ಳುವ ಪಾಲಿಕೆ ಅಧಿಕಾರಿಗಳು, ಹೊಸದಾಗಿ ಸ್ಥಾಪಿಸಲಾದ ವಿದ್ಯುತ್ ಕಂಬಗಳಿಗೆ ಅದ್ಹೇಗೆ ಎಲ್​​ಇಡಿ ಬಲ್ಬು ಅಳವಡಿಸಿ ನಿರ್ವಹಣೆ ಮಾಡುತ್ತಾರೋ ಎಂಬ ಯಕ್ಷಪ್ರಶ್ನೆಯು ಮಹಾನಗರದ ಸಾರ್ವಜನಿಕರನ್ನ ಕಾಡುತ್ತಿದೆ.‌ ಈ ಕುರಿತು ಈಟಿವಿ ಭಾರತ ರಿಯಾಲಿಟಿ ಚೆಕ್​​​ನಲ್ಲಿ ಅದೆಲ್ಲಾ ಗೊತ್ತಾಗಿದೆ.

ಹಾಸನದ ಪರಿಸ್ಥಿತಿ ಇದು:

ಇನ್ನು ಹಾಸನ ಇದಕ್ಕೇನು ಹೊರತಾಗಿಲ್ಲ. ಇಲ್ಲಿನ ನಗರಸಭೆ ವತಿಯಿಂದ 35 ವಾರ್ಡ್​​ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದ್ರೆ ನಿರ್ವಹಣೆ ಹೇಳಿಕೊಳ್ಳುವಷ್ಟಿಲ್ಲ. ರಾತ್ರಿಯಾದ್ರೆ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳು ಬೆಳಗದ ಕಾರಣ ಪುಂಡ-ಪೋಕರಿಗಳ ಆವಾಸಸ್ಥಾನವಾಗಿ ಬಿಟ್ಟಿದೆ. ರಾತ್ರಿ ಆಗುತ್ತಲೇ ಬೈಕ್ ವ್ಹೀಲಿಂಗ್ ಮಾಡುವ ಮೂಲಕ ನಾಗರಿಕರಿಗೆ ತೊಂದರೆ ಕೊಡ್ತಿದ್ದಾರೆ. ಅದಲ್ಲದೆ, ಅಪರಾಧ ಪ್ರಕರಣಗಳಲ್ಲಿ ಕೊಲೆ, ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. 15 ದಿನಗಳ ಹಿಂದೆ ನಗರದ ಪ್ರಮುಖ ರಸ್ತೆ ಎಂಆರ್ ವೃತ್ತದ ಬಳಿ ನಡುರಾತ್ರಿ ಮಹಿಳೆಯೊಬ್ಬರ ಕೊಲೆ ನಡೆದಿದೆ. ಅದಕ್ಕೆ ಬೀದಿ ದೀಪ ಇಲ್ಲದಿರುವುದೇ ಪ್ರಮುಖ ಕಾರಣ ಎಂದರೆ ತಪ್ಪಾಗದು. ಇನ್ನು ಕೊಳಗೇರಿ ಪ್ರದೇಶಗಳ ಕತೆ ಕೇಳೋದೇ ಬೇಡ ಬಿಡಿ. ಕೆಲವು ಕಡೆ ಹಗಲಿನಲ್ಲೇ ದೀಪಗಳು ಜಗಮಗಿಸುತ್ತಿರುತ್ತವೆ. ಹೀಗಾಗಿ ಹಾಸನದ ಜನತೆಯ ಚೆಸ್ಕಾಂ ಮತ್ತು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಯಚೂರು ನಗರಸಭೆಯಿಂದ ನಗರದ 35 ವಾರ್ಡ್‌ಗಳಲ್ಲಿ ಹತ್ತು ಸಾವಿರ ವಿದ್ಯುತ್ ಬೀದಿ ದೀಪಗಳನ್ನ ಅಳವಡಿಸಲಾಗಿದೆ. ಅವುಗಳ ನಿರ್ವಹಣೆಗೆ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಅದಕ್ಕೆ ನಗರಸಭೆಯಿಂದ ಪ್ರತಿ ತಿಂಗಳು 8 ಲಕ್ಷ 30 ಸಾವಿರ ಪಾವತಿ ಮಾಡಲಾಗುತ್ತದೆ. ಆದ್ರೆ ಬಡಾವಣೆ ನಿವಾಸಿಗಳು ವಿದ್ಯುತ್ ಬೀದಿ ದೀಪದ ದುರಸ್ತಿ, ಅಳವಡಿಕೆ ದೂರು ಸಲ್ಲಿಸಿದ್ರೂ ನಗರಸಭೆಯಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎನ್ನಲಾಗಿದೆ ಎನ್ನುತ್ತಾರೆ ನಿವಾಸಿಯೊಬ್ಬರು.

ಒಟ್ಟಿನಲ್ಲಿ ರಾತ್ರಿಯಾದರೂ ಬೆಳಗುವುದಿಲ್ಲ. ಕತ್ತಲಾಗುತ್ತಿದ್ದಂತೆ ಬಹುತೇಕ ಭಾಗದಲ್ಲಿ ಮನೆ‌, ಅಂಗಡಿಗಳಲ್ಲಿ ಅಳವಡಿಸಿಕೊಂಡಿರುವ ದೀಪಗಳಿಂದ ಬರುವ ಬೆಳಕಿನಲ್ಲೇ ಜನರ ಸಂಚಾರ, ವ್ಯವಹಾರ ನಡೆಯುವ ಸ್ಥಿತಿ ಇದೆ. ಇತ್ತ ಗುತ್ತಿಗೆದಾರರು ಸಹ ಸಮರ್ಪಕವಾಗಿ ನಿರ್ವಹಣೆಗೆ ಕೈ ಹಾಕುತ್ತಿಲ್ಲ. ವಿದ್ಯುತ್ ಬೀದಿ ದೀಪಗಳ ನಿರ್ವಹಣೆಗೆ ಪ್ರತಿ ತಿಂಗಳು ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ವಿದ್ಯುತ್ ಕಂಬಗಳಿಗೆ ಬಲ್ಬು ಅಳವಡಿಸುವಂತೆ ಅಧಿಕಾರಿಗಳಿಗೆ ಕೋರಿದ್ರೆ ಸಾಕು ಟೆಂಡರ್ ಪ್ರಕ್ರಿಯೆ ನಡೆದಿಲ್ಲ.‌ ಇನ್ನು ಮೂರು ತಿಂಗಳು ಆಗುತ್ತೆ. ನಿಮಗೇನಾದ್ರೂ ಅರ್ಜೆಂಟ್ ಆಗಿ ಬಲ್ಬು ಅಳವಡಿಸಬೇಕೆಂದರೆ ನೀವೇ ತರಿಸಿಕೊಳ್ಳಿ ಎಂಬೆಲ್ಲಾ ಮಾತುಗಳನ್ನು ಅಧಿಕಾರಿಗಳನ್ನು ಆಡುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಅಧಿಕಾರಿ ವರ್ಗ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.

ABOUT THE AUTHOR

...view details