ಬೆಂಗಳೂರು: ನಗರದಲ್ಲಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಮೆಗಾಫೋನ್ ಸ್ಪೀಕರ್ ಬಳಸುತ್ತಿದ್ದಾರೆ. ಇದರಿಂದಾಗಿ ಹಿರಿಯ ನಾಗರಿಕರು ಹಾಗೂ ಆನ್ಲೈನ್ ಕ್ಲಾಸ್ ಕೇಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.
ಇದರಿಂದಾಗಿ ವಿವಿಧ ವೃತ್ತಿಪರ ಉದ್ಯೋಗಿಗಳಿಗೂ ಕಿರಿಕಿರಿಯಾಗುತ್ತಿದೆ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರುವವರ ಸಂಖ್ಯೆ ಹೆಚ್ಚಾಗಿದೆ. ಮೆಗಾಫೋನ್ ಸ್ಪೀಕರ್ ಬಳಕೆಯಿಂದ ತೊಂದರೆಯಾಗುತ್ತಿದೆ ಎಂದು ಕಳೆದ ಜನವರಿಯಲ್ಲಿ 711 ಮಂದಿ ದೂರು ನೀಡಿದರೆ, ಫೆಬ್ರವರಿಯಲ್ಲಿ 650 ಮಂದಿ ದೂರು ದಾಖಲಿಸಿದ್ದಾರೆ.
ಮಾರ್ಚ್‌ನಲ್ಲಿ 621 ದೂರುಗಳು ದಾಖಲಾದರೆ, ಲಾಕ್ಡೌನ್ ಅವಧಿಯಾದ ಏಪ್ರಿಲ್‌ನಲ್ಲಿ 275 ದೂರು ದಾಖಲಾಗಿವೆ. ಮೇನಲ್ಲಿ 136 ಮತ್ತು ಜೂನ್ನಲ್ಲಿ 186 ಹಾಗೂ ಜುಲೈನಲ್ಲಿ ಈ ಸಂಖ್ಯೆ 250ಕ್ಕೆ ಸೀಮಿತವಾಗಿತ್ತು. ಆಗಸ್ಟ್ನಲ್ಲಿ 484 ದೂರುಗಳು ದಾಖಲಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಕರ್ನಾಟಕ ಪೊಲೀಸ್ ಕಾಯ್ದೆ 92ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೆಗಾಫೋನ್ ಅಥವಾ ಲೌಡ್ ಸ್ಪೀಕರ್ ಬಳಸುವುದು ಅಪರಾಧ. ಅಲ್ಲದೆ, ಮೆಗಾಪೋನ್ ಬಳಸುವ ಮುನ್ನ ಅನುಮತಿ ಪಡೆಯಬೇಕು. ಸಣ್ಣ ವ್ಯಾಪಾರಿಗಳು ಸ್ಪೀಕರ್ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕೆಲ ವರ್ಷಗಳ ಹಿಂದೆ ನಮಗೆ ಯಾವುದೇ ರೀತಿಯ ಸ್ಪೀಕರ್ಗಳ ಅಗತ್ಯವಿರಲಿಲ್ಲ. ಕೊರೊನಾ ಬಿಕ್ಕಟ್ಟು ಬಳಿಕ ಇದರ ಅವಶ್ಯಕತೆ ಹೆಚ್ಚಾಗಿದೆ. 1000 ರಿಂದ 1500 ರೂಪಾಯಿ ಮೆಗಾಫೋನ್ ಖರೀದಿಸಿ ವಾಯ್ಸ್ ರೆಕಾರ್ಡ್ ಮಾಡಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ. ಅಲ್ಲದೆ, ಅಪಾರ್ಟ್ಮೆಂಟ್ಗಳು ಹೆಚ್ಚಾದ ಹಿನ್ನೆಲೆ ಪ್ರತಿಯೊಬ್ಬ ಗ್ರಾಹಕರಿಗೆ ತಲುಪುವ ಉದ್ದೇಶದಿಂದ ಮೆಗಾಪೋನ್ ಬಳಸುತ್ತೇವೆ ಎಂದು ಸಣ್ಣ ವ್ಯಾಪಾರಿಗಳು ತಿಳಿಸುತ್ತಾರೆ.