ಬೆಂಗಳೂರು:ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ, ಬೀದಿ ಬದಿಯ ತಿಂಡಿ ತಿನಿಸಿನ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿತ್ತು. ಹಗಲು ರಾತ್ರಿ ಎನ್ನದೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ, ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ ವ್ಯಾಪಾರಿಗಳ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿತ್ತು.
ಆದರೆ ಇದೀಗ ಅನ್ಲಾಕ್ ನಂತರ ಬೀದಿ ಬದಿಯ ವ್ಯಾಪಾರ ಸುಧಾರಿಸುತ್ತಿದ್ದು, ಮೊದಲು ಇದ್ದ ವಹಿವಾಟು ಆಗದಿದ್ದರೂ ಜೀವನೋಪಾಯಕ್ಕೆ ಬೇಕಾದಷ್ಟು ಆದಾಯ ಬರುತ್ತಿದೆ. ಶೇಕಡ 60 ರಷ್ಟು ಗ್ರಾಹಕರು ಇದೀಗ ಬೀದಿ ಬದಿ ವ್ಯಾಪಾರಸ್ಥರ ಬಳಿ ಬರುತ್ತಿರುವುದು ಸಾಮಾನ್ಯವಾಗಿದ್ದು, ಪಾಲಿಕೆ ಸೂಚನೆ ಪ್ರಕಾರ ಬೀದಿ ಬದಿ ವ್ಯಾಪಾರಸ್ಥರು ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಹಕರು ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಕೊರೊನಾ ಬರುವ ಮೊದಲಿನಿಂದಲೂ ಕಾಲರಾ ಭೀತಿಯಿಂದ ಬೀದಿ ಬದಿಯ ತಿಂಡಿ ವ್ಯಾಪಾರಕ್ಕೆ ಪಾಲಿಕೆ ನಿಷೇಧ ಏರಿತ್ತು. ಸುಮಾರು 6 ತಿಂಗಳ ಬಳಿಕ ಬೀದಿ ಬದಿಯ ವ್ಯಾಪಾರಿಗಳು ಒಲೆ ಹಚ್ಚಿದ ನಂತರ, ಈಗ ನಗರದ ಹಲವು ಕಡೆಗಳಲ್ಲಿ ತಕ್ಕ ಮಟ್ಟಿಗೆ ಊಟ ತಿಂಡಿಯ ವ್ಯಾಪಾರ ನಡೆಯುತ್ತಿದೆ.