ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಮೂರೂ ರಾಜಕೀಯ ಪಕ್ಷಗಳು ಚುನಾವಣೆ ಮೂಡ್ಗೆ ಜಾರಿವೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಿಸಿರುವುದರ ಜೊತೆಗೆ ಕರ್ನಾಟಕಕ್ಕೂ ಒಂದಷ್ಟು ಯೋಜನೆಗಳು ಸಿಕ್ಕಿವೆ. ಹಾಗಾಗಿ, ಆ ಉತ್ಸಾಹದಲ್ಲೇ ರಾಜ್ಯ ನಾಯಕರು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.
2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ರೀತಿಯಲ್ಲಿ ಚುನಾವಣಾ ಕದನಕ್ಕೆ ತಾಲೀಮು ನಡೆಸಲು ಸಜ್ಜಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರ ನಾಯಕರ ರಾಜ್ಯ ಪ್ರವಾಸ ಕೂಡ ನಿಗದಿಯಾಗುತ್ತಿದ್ದು, ರಾಜ್ಯ ನಾಯಕರಿಗೆ ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧದ ಅಸ್ತ್ರಗಳನ್ನು ತಯಾರು ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.
ಸುರಕ್ಷಿತ ಕ್ಷೇತ್ರಗಳಿಗಾಗಿ ಶೋಧ: ವಿಧಾನಸಭೆ ಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸಿ ಮತದಾರರ ಓಲೈಕೆಗೆ ಹಲವು ರೀತಿಯ ಸರ್ಕಸ್ ನಡೆಸುತ್ತಿರುವಾಗಲೇ ಕೆಲವು ನಾಯಕರು ಸುರಕ್ಷಿತ ಕ್ಷೇತ್ರಗಳ ಶೋಧದಲ್ಲಿ ತಲ್ಲೀನರಾಗಿದ್ದಾರೆ. ತವರು ಕ್ಷೇತ್ರದಲ್ಲಿ ಕೆಲವರಿಗೆ ಗೆಲ್ಲುವ ಅತಿಯಾದ ಆತ್ಮವಿಶ್ವಾಸವಿದ್ದರೆ ಇನ್ನು ಕೆಲವರಿಗೆ ಒಳ ಹೊಡೆತದ ಭೀತಿ ಇರುವುದರಿಂದ ಹೆಚ್ಚುವರಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವ ತವಕದಲ್ಲಿದ್ದಾರೆ.
ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ನೇತಾರರೇ ಈ ಬಾರಿ ಸುರಕ್ಷಿತ ಕ್ಷೇತ್ರಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿರುವುದು ಗೊತ್ತಿರುವ ಸಂಗತಿಯೇ. ಸಾಮಾನ್ಯವಾಗಿ ಬಿಜೆಪಿ ನಾಯಕರು ಒಂದೇ ಕ್ಷೇತ್ರಕ್ಕೆ ಸ್ಪರ್ಧಿಸಲು ಹರಸಾಹಸ ನಡೆಸಬೇಕು. ಇದಕ್ಕೆ ಕಾರಣ, ಎಷ್ಟೇ ಪ್ರಭಾವಿ ಇದ್ದರೂ ವರಿಷ್ಠರು ಟಿಕೆಟ್ ನೀಡುವುದು ಅಷ್ಟು ಸುಲಭವಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಈಗಾಗಲೇ ತನ್ನ ತಂದೆಯ ಕ್ಷೇತ್ರ ಶಿಕಾರಿಪುರದಿಂದ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ವರುಣಾದಿಂದಲೂ ಸ್ಪರ್ಧೆ ವದಂತಿ:ಶಿಕಾರಿಪುರದ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ಮತ್ತೊಂದು ಕಡೆ ಮೈಸೂರು ಜಿಲ್ಲೆ ವರುಣಾದಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊನೆ ಕ್ಷಣದಲ್ಲಿ ತಮ್ಮ ನಿಲುವು ಬದಲಾಯಿಸಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ವಿರುದ್ಧ ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ.
ಬೊಮ್ಮಾಯಿ ಕೂಡ 2 ಕ್ಷೇತ್ರದಿಂದ ಸ್ಪರ್ಧೆ?:ಪಂಚಮಸಾಲಿ ಮೀಸಲಾತಿ ಹೋರಾಟದಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಬಾರಿ ಎರಡು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಿಂದ ಹೆಚ್ಚುವರಿಯಾಗಿ ದಾವಣಗೆರೆ ಉತ್ತರ ಇಲ್ಲವೇ ದಾವಣಗೆರೆ ದಕ್ಷಿಣ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ವಂದತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಶಿಗ್ಗಾವಿಯಲ್ಲಿ ಪಂಚಮಸಾಲಿ ಸಮುದಾಯವೇ ನಿರ್ಣಾಯಕವಾಗಿರುವುದು ಬಸವರಾಜ ಬೊಮ್ಮಾಯಿ ಅವರಿಗೆ ತಲೆಬಿಸಿ ತಂದಿದೆ. ಹೀಗಾಗಿ ತಮ್ಮ ಸಮುದಾಯ ಹೆಚ್ಚಾಗಿರುವ ದಾವಣಗೆರೆ ಉತ್ತರ ಅಥವಾ ದಕ್ಷಿಣದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಹಾವೇರಿ ಜಿಲ್ಲೆ ರಾಣೆಬೆನ್ನೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅಲ್ಲಿ ಬಿಜೆಪಿಯ ಹಾಲಿ ಶಾಸಕರೇ ಇರುವುದರಿಂದ ಈಶ್ವರಪ್ಪ ಲೆಕ್ಕಾಚಾರ ಅಷ್ಟು ಸುಲಭವಾಗಿ ಈಡೇರುವ ಸಾಧ್ಯತೆ ಇಲ್ಲ. ಎಷ್ಟೇ ಪ್ರಭಾವಿ, ಜನನಾಯಕ ಎನಿಸಿಕೊಂಡರೂ ಬಿಜೆಪಿಯಲ್ಲಿ ಒಬ್ಬರಿಗೆ ಎರಡು ಟಿಕೆಟ್ ನೀಡುವುದು ಅಷ್ಟು ಸುಲಭವಲ್ಲ. ಕೆಲವರು ಸುರಕ್ಷಿತ ಕ್ಷೇತ್ರಗಳ ಮೇಲೆ ಕಣ್ಣು ಹಾಕಿದರೂ ಬಿಜೆಪಿಯ ಚುನಾವಣಾ ಚಾಣುಕ್ಯರ ನಡೆ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಮೂರು ಪಕ್ಷಗಳ ಶಾಸಕರು ಸ್ವಕ್ಷೇತ್ರಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಬಹುತೇಕ ದಿನಗಳಲ್ಲಿ ರಾಜಧಾನಿಯಲ್ಲೇ ಇರುತ್ತಿದ್ದ ಶಾಸಕರು ಈಗ ಯಾರೂ ಸಹ ಶಾಸಕರ ಭವನ ಅಥವಾ ವಿಧಾನಸೌಧದ ಕಡೆ ಮುಖ ಮಾಡುತ್ತಿಲ್ಲ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಆಶ್ವಾಸನೆಯಲ್ಲಿರುವ ಹಲವು ಶಾಸಕರು ಕ್ಷೇತ್ರದ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವು ಶಾಸಕರು ರಾಜ್ಯ ನಾಯಕರ ಮೂಲಕ ವರಿಷ್ಠರ ಮೊರೆ ಹೋಗುತ್ತಿದ್ದಾರೆ.
ಒಟ್ಟಾರೆ, ರಾಷ್ಟ್ರೀಯ ಪಕ್ಷಗಳು ಶತಾಯಗತಾಯ ಅಧಿಕಾರ ಹಿಡಿಯಲೇ ಬೇಕೆಂದು ಸಕಲ ಸಿದ್ಧತೆ ನಡೆಸುತ್ತಿದ್ದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ಪೂರ್ಣ ಬಹುಮತದೊಂದಿಗೆ ರಾಜ್ಯದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡಿ ರಾಜ್ಯದ ಜನರ ಗಮನ ಸೆಳೆಯುವ ಕಾರ್ಯತಂತ್ರಕ್ಕೆ ಅಣಿಯಾಗುತ್ತಿವೆ. ರಾಜ್ಯದ ಸಮಸ್ಯೆಗಳು ಕೇವಲ ಚುನಾವಣೆಯ ಭಾಷಣಕ್ಕೆ ಸೀಮಿತವಾಗದೆ, ಅದಕ್ಕೆ ಪರಿಹಾರ ಸಿಗುವುದೇ ಎಂದು ಕಾದುನೋಡಬೇಕು.