ಬೆಂಗಳೂರು : ಕಾಲೇಜೊಂದರ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಕಿಡಿಗೇಡಿಯೋರ್ವ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯಾ ಕಾಲೇಜಿನ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ಕಿಡಿಗೇಡಿಯನ್ನು ಬಂಧಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಘಟನೆ ವಿವರ.. ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ವಿಜಯಾ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಶೌಚಾಲಯದ ಒಳಗೆ ಅಪರಿಚಿತ ಯುವಕ ಇರುವುದು ಗೊತ್ತಾಗಿದೆ. ಈ ವೇಳೆ ಯುವತಿಯನ್ನು ನೋಡುತ್ತಿದ್ದಂತೆ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಕ್ಕೊಳಗಾದ ವಿದ್ಯಾರ್ಥಿನಿ ಕಿರುಚಿಕೊಂಡಿದ್ದಾಳೆ. ಬಳಿಕ ಗಾಬರಿಗೊಂಡ ಯುವಕ ಶೌಚಾಲಯದ ಬಾಗಿಲಿಗೆ ಚಿಲಕ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾಲೇಜಿನ ಲೇಡಿಸ್ ಟಾಯ್ಲೆಟ್ ಗೆ ನುಗ್ಗಿ ಅಸಭ್ಯ ವರ್ತನೆ ತೋರಿದ ಯುವಕನನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.