ಬೆಂಗಳೂರು: ಕಾಲೇಜಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಯುವಕ ಇಂದು ರಾಷ್ಟ್ರಮಟ್ಟದ ಪ್ರೊ ಕಬಡ್ಡಿ ಲೀಗ್ನ ಫಿಟ್ನೆಸ್ ತರಬೇತುದಾರರಾಗಿ ಹೆಸರು ಗಳಿಸುತ್ತಿದ್ದಾರೆ. ಅವರ ಈ ಸಾಧನೆಗೆ ನೆರವಾದದ್ದು ಕಾಲೇಜಿನಲ್ಲಿದ್ದಾಗ ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡಿದ್ದ ಆರ್ಚರಿ(ಬಿಲ್ಲುಗಾರಿಕೆ) ಎಂದರೆ ಅಚ್ಚರಿಯಾಗುತ್ತದೆ. ಈ ಕನ್ನಡಿಗನ ಕುರಿತ ಮಾಹಿತಿ ಇಲ್ಲಿದೆ..
28ರ ಹರೆಯದ ಮಹೇಶ್ ಪ್ರೊ ಕಬಡ್ಡಿ ಲೀಗ್ನಲ್ಲಿ ಗುಜರಾತ್ ತಂಡದ ತರಬೇತುದಾರನಾಗಿ ಕಾರ್ಯನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ದೇಹಾರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮೊದಲು ಕ್ರೀಡೆಯಲ್ಲಿ ಆಸಕ್ತಿ ಹೊಂದಿರದ ಮಹೇಶ್, ಆರ್ಚರಿ ಆಯ್ಕೆ ಮಾಡಿಕೊಂಡಿದ್ದು ಆಕಸ್ಮಿಕವಂತೆ.
ಮಹೇಶ್ ತನ್ನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಕ್ರೀಡಾ ಪ್ರಕಟಣೆಯಿಂದ ಪ್ರೇರಿತಗೊಂಡು ಶಿಕ್ಷಕರ ಸಲಹೆಯಂತೆ ಆರ್ಚರಿ ಕ್ರೀಡೆಗೆ ಸೇರಿಕೊಂಡಿದ್ದಾರೆ. ಮಹೇಶ್ ತಂದೆ ಕಾರು ಚಾಲಕರಾಗಿ ಕೆಲಸ ಮಾಡುತ್ತ ತಮ್ಮ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬದಿಂದ ಕ್ರೀಡೆಗೆ ನೆರವು ಸಾಧ್ಯವಿರಲಿಲ್ಲ. ಆರ್ಚರಿ ಕಿಟ್ ಖರೀದಿಸಲು ಮಹೇಶ್ ಪರದಾಟ ನಡೆಸಿದ್ದರು. ಸ್ಥಳೀಯ ಶಾಸಕರೊಬ್ಬರ ನೆರವಿನಿಂದ ಆರ್ಚರಿ ಅಭ್ಯಾಸ ಆರಂಭಿಸಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದರು.
ಓದಿ:ಚಲಿಸುತ್ತಿದ್ದ ರೈಲಿನಲ್ಲೇ ಕಬಡ್ಡಿ ಆಟಗಾರ್ತಿ ಮೇಲೆ ರೇಪ್... ಶೌಚಾಲಯದಲ್ಲಿ ದುಷ್ಕೃತ್ಯ
ಹದಗೆಟ್ಟ ಆರ್ಥಿಕ ಪರಿಸ್ಥಿತಿ: ಆರ್ಚರಿಯಿಂದ ಒಂದು ವಿಷಯದ ಪರೀಕ್ಷೆಗೆ ಹಾಜರಾಗಲಿಲ್ಲ. ಕಾಲೇಜು ಮುಗಿಯುತ್ತಿದ್ದಂತೆ ಕುಟುಂಬದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಕೆಲಸಕ್ಕೆ ಹೋಗುವ ಅನಿವಾರ್ಯತೆ, ಕ್ರೀಡೆ ಜೀವನದ ನಡುವಿನ ಆಯ್ಕೆ ಕಗ್ಗಂಟಾಯಿತು. ಕೆಲಸ ಇಲ್ಲದ ಎಷ್ಟೋ ದಿನ ಕ್ರೀಡಾಂಗಣದಲ್ಲಿ ಟಿಕೆಟ್ ಕಲೆಕ್ಷನ್ ಮಾಡುವ ಕೆಲಸ ಮಾಡಿದೆ. ಬಳಿಕ ಜಿಮ್ ತರಬೇತುದಾರನಾಗಿ ಕೆಲಸದಿಂದ ಜೀವನದ ದಿಕ್ಕು ಬದಲಾಯಿತು. ಆರ್ಚರಿಯಲ್ಲಿ ಕಲಿತ ವಿದ್ಯೆ ಕೂಡಾ ಇದಕ್ಕೆ ಪೂರಕವಾಯಿತು ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ ಮಹೇಶ್.
ಕ್ರೀಡಾ ಇಲಾಖೆಯಲ್ಲಿ ತರಬೇತುದಾರ:ಜಿಮ್‌ನಲ್ಲಿ ಕೆಲಸ ತೊರೆದ ನಂತರ ಯುವಜನ ಸೇವಾ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯಲ್ಲಿ ತರಬೇತುದಾರನಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದೆ. ಅಲ್ಲಿ ಕ್ರೀಡಾಪಟುಗಳಿಗೆ ಫಿಟ್ನೆಸ್ ತರಬೇತಿ ನೀಡಲು ಆರಂಭಿಸಿದೆ. ಆದರೆ, ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳುವಂತಾಯಿತು ಎಂದರು.
ಜೀವನದ ದಿಕ್ಕಿನಲ್ಲಿ ಬದಲಾವಣೆ: ಖಾಸಗಿ ತರಬೇತುದಾರನಾಗಿ ಕೆಲವು ದಿನಗಳ ಬಳಿಕ ವಿಜಯ ಬ್ಯಾಂಕ್, ಒಲಿಂಪಿಕ್ ಸಂಸ್ಥೆಯ ಕ್ರೀಡಾ ತಂಡಗಳಿಗೆ ತರಬೇತಿ ನೀಡಿದೆ. ಆಗ ಕಬಡ್ಡಿ ತಂಡದ ನಾಲ್ವರು ಯುವಕರು ಪ್ರೊ ಕಬಡ್ಡಿ ಲೀಗ್‌ಗೆ ಆಯ್ಕೆಯಾದಾಗ ನನ್ನ ಜೀವನದ ದಿಕ್ಕು ಬದಲಾಯಿತು ಎಂದು ಹೇಳಿದರು. ಹೀಗೆ ಅವರು ತಮ್ಮ ಜೀವನದಲ್ಲಿ ನಡೆದ ಸಂಗತಿಗಳ ಬಗ್ಗೆ ವಿವರಿಸಿದರು.