ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರ ಮಧ್ಯಂತರ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರುಗಳ ವರ್ಗಾವಣೆಯನ್ನು ಮಧ್ಯಂತರ ಅವಧಿಯ ಡಿಸೆಂಬರ್ ಮಾಹೆಯಲ್ಲಿ ನಡೆಸಲು ಆಯುಕ್ತಾಲಯ ಪ್ರಕಟಣೆಯನ್ನು ಹೊರಡಿಸಿದೆ. ಸರ್ಕಾರವು ವರ್ಗಾವಣೆಗಳಿಗೆ ತೋರಿಸುತ್ತಿರುವ ಆಸಕ್ತಿ, ಅಭಿವೃದ್ಧಿ ವಿಷಯಗಳಿಗೆ ಹಾಗೂ ನೇಮಕಾತಿಗಳಿಗೆ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ಆಗಿ 6 ತಿಂಗಳು ಮಾತ್ರ ಆಗಿದೆ. ಮತ್ತೆ ಈಗ ಎರಡನೇ ಬಾರಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ವರ್ಗಾವಣೆ ಎನ್ನುವುದು ಆಡಳಿತಾತ್ಮಕ ಮತ್ತು ಸಾರ್ವಜನಿಕ ಅನುಕೂಲಕ್ಕೆ ಮಾಡಬೇಕಾದ ಚಟುವಟಿಕೆಯೆ ಹೊರತು, ಇಲಾಖೆಗಳಿಗೆ ಸಚಿವರಿಗೆ, ಸರ್ಕಾರಕ್ಕೆ ಅದೊಂದು ಚಟವಾಗಬಾರದು ಎಂದು ಟೀಕಿಸಿದ್ದಾರೆ.
ಸರ್ಕಾರದ ಯಾವುದಾದರೊಂದು ಇಲಾಖೆ ಒಂದೇ ವರ್ಷದಲ್ಲಿ ಎರಡು ಮೂರು ಬಾರಿ ವರ್ಗಾವಣೆ ಮಾಡಿರುವ ಉದಾಹರಣೆಗಳಿವೆಯೇ?. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುತ್ತೇನೆಂದು ಹೇಳಿ ವರ್ಷದಲ್ಲಿ ಎರಡ್ಮೂರು ಬಾರಿ ಅಧಿಸೂಚನೆ ಹೊರಡಿಸಿಕೊಂಡು ಕೂತಿದೆ. ಕುಲಪತಿಗಳ ನೇಮಕಾತಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮುಂತಾದ ವಿಷಯಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆಯೆಂದು ಆಡಳಿತ ಪಕ್ಷದ ಶಾಸಕ, ಸಹಚರರೇ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸೆಮಿಸ್ಟರ್ಗಳ ಫಲಿತಾಂಶ ಪ್ರಕಟವಾಗಿಲ್ಲ: ಇದರ ಮಧ್ಯೆ ಇಲಾಖೆಯನ್ನು ಸುಧಾರಿಸುವ ಬದಲು ಅರಾಜಕತೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಎನ್ಇಪಿ ಎಂಬುದು ಕೇವಲ ಹೆಸರಿಗೆ ಮಾತ್ರದ ಘೋಷಣೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಎನ್ನುವುದು ಪಾತಾಳಕ್ಕೆ ತಲುಪಿದೆ. ಸರಿಯಾಗಿ ಪಠ್ಯ ಪುಸ್ತಕಗಳನ್ನು, ರೆಫರೆನ್ಸ್ ಪುಸ್ತಕಗಳನ್ನು ಒದಗಿಸಲಾಗುತ್ತಿಲ್ಲ, ಲೈಬ್ರರಿಗಳಲ್ಲೂ ಹಳೆಯ ಪುಸ್ತಕಗಳೇ ಇವೆ. ವಿಶ್ವವಿದ್ಯಾನಿಲಯಗಳಲ್ಲೂ ಈ ಕುರಿತು ಗೊಂದಲ ಉಂಟಾಗಿ 8 ತಿಂಗಳಾದರೂ ಕೆಲವು ಸೆಮಿಸ್ಟರ್ಗಳ ಫಲಿತಾಂಶ ಪ್ರಕಟವಾಗಿಲ್ಲ. ಹಿಂದಿನ ವರ್ಗಾವಣೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ನಿರಂತರವಾಗಿ 20 ವರ್ಷ ಸೇವೆ ಸಲ್ಲಿಸಿದವರು ಮತ್ತೆ ಅದೇ ನಗರದ ಬೇರೆ ಕಾಲೇಜಿಗೆ ವರ್ಗಾವಣೆಗೊಂಡಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಸರ್ಕಾರವೇ ರೂಪಿಸಿರುವ ನಿಯಮಾವಳಿಗೆ ವಿರುದ್ಧವಾಗಿ ಈ ಮಧ್ಯಂತರ ಅವಧಿಯ ಡಿಸೆಂಬರ್ ಮಾಹೆಯಲ್ಲಿ ವರ್ಗಾವಣೆ ಮಾಡುವುದರಿಂದ ವರ್ಗಾವಣೆಗೊಳ್ಳುವ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವರ್ಷದ ಮಧ್ಯದಲ್ಲಿ ವರ್ಗಾವಣೆಯಾದರೆ ಅಧ್ಯಾಪಕರು, ಮನೆ, ಮಡದಿ, ಮಕ್ಕಳನ್ನು ಬಿಟ್ಟು ಎಲ್ಲಿಗೆ ಹೋಗಲು ಸಾಧ್ಯ, ಅವರೂ ಮನುಷ್ಯರಲ್ಲವೇ?, ಬಿಜೆಪಿಯವರು ಅಧ್ಯಾಪಕರುಗಳನ್ನು ರೋಬೋಟ್‍ಗಳೆಂದು ಭಾವಿಸಿದ್ದಾರೆಯೇ?, ಅಧ್ಯಾಪಕರನ್ನು ಕಾಲವಲ್ಲದ ಕಾಲದಲ್ಲಿ ವರ್ಗಾವಣೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ?. ಆದ್ದರಿಂದ ವರ್ಗಾವಣೆ ಮಾಡಲು ನೀಡಿರುವ ಪ್ರಕಟಣೆಯನ್ನು ಕೂಡಲೇ ಹಿಂಪಡೆದು, ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ವರ್ಗಾವಣೆ ಮಾಡುವಂತೆ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ದಯಾನಂದ ಕೆ.ಎ ನೇಮಕ