ಬೆಂಗಳೂರು:ರಾಜ್ಯದ ರೈತರಿಗೆ ಗಿಳಿಪಾಠ ಹೇಳುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಿಳುನಾಡು ರಾಜ್ಯಕ್ಕೆ ಮೂರನೇ ಬೆಳೆ ಬೆಳೆಯುವುದಕ್ಕಾಗಿ ಹರಿಯುತ್ತಿರುವ ಕಾವೇರಿ ನೀರು ತಡೆಯುವ ಕೆಲಸಕ್ಕೆ ಮುಂದಾಗಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸಲಹೆ ನೀಡಿದರು.
ನೀರಾವರಿ ಮಂತ್ರಿಯಾಗಿರುವ ಅವರು ಇಂಡಿಯಾ ಒಕ್ಕೂಟ ಬಲಪಡಿಸುವ ಚಿಂತನೆಯಲ್ಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಓಲೈಸುವ ಕಾರಣದಿಂದ ರಾಜ್ಯದ ನೀರು ಬಿಟ್ಟು ರೈತರನ್ನು ಬಲಿ ಕೊಟ್ಟಿದ್ದಾರೆ ಎಂದು ದೂರಿದರು.
ಕಾವೇರಿ ನೀರಿಗಾಗಿ ರಾಷ್ಟ್ರಪತಿ, ಕೇಂದ್ರ ಜಲ ಸಂಪನ್ಮೂಲ ಸಚಿವ ಹಾಗೂ ಕಾವೇರಿ ಪ್ರಾಧಿಕಾರದ ಮುಖ್ಯಸ್ಥರನ್ನು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ನಿಯೋಗ 9ರಂದು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದು, ಸಮಯ ನಿಗದಿಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಾಧ್ಯಕ್ಷ, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ
ವಿ.ವೆಂಕಟಸ್ವಾಮಿ ಮಾತನಾಡಿ, ರಾಜ್ಯದ ಜನರನ್ನು ಮರೆತು ನೀರು ಹರಿಸುವ ಮೂಲಕ ತಮಿಳುನಾಡಿನ ಓಲೈಕೆ ನೀತಿಯನ್ನು ರಾಜ್ಯ ಸರ್ಕಾರ ಮಾಡಬಾರದು. ಕಾವೇರಿ ನೀರಿಗಾಗಿ ಇಂದು ನೂರಾರು ದಲಿತ ಸಂಘಟನೆಗಳ ಕಾರ್ಯಕರ್ತರು ಧರಣಿ ಆರಂಭಿಸಿದ್ದಾರೆ ಎಂದರು.