ಕರ್ನಾಟಕ

karnataka

ETV Bharat / state

ತಪ್ಪು ಗ್ರಹಿಕೆಯಿಂದ ನಮ್ಮ ಮನೆ ಮೇಲೆ ಕಲ್ಲು ತೂರಾಟ, ಯಾರ ಮೇಲೂ ಕ್ರಮ ಬೇಡ: ಬಿಎಸ್​ವೈ - ಬಿಎಸ್​ವೈ ನಿವಾಸದ ಮೇಲೆ ಕಲ್ಲು ತೂರಾಟ

ತಪ್ಪು ಗ್ರಹಿಕೆಯಿಂದ ಬಂಜಾರ ಸಮುದಾಯದ ಕಾರ್ಯಕರ್ತರು ಶಿಕಾರಿಪುರದಲ್ಲಿ ನಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಯಾರ ಮೇಲೂ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Former Chief Minister BS Yeddyurappa
ಬಿ ಎಸ್‌ ಯಡಿಯೂರಪ್ಪ

By

Published : Mar 27, 2023, 6:24 PM IST

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು.

ಬೆಂಗಳೂರು:ತಪ್ಪು ಗ್ರಹಿಕೆಯಿಂದ ಬಂಜಾರ ಸಮುದಾಯದ ಜನರು ಶಿಕಾರಿಪುರದಲ್ಲಿ ನಮ್ಮ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಹಾಗಾಗಿ ಯಾರ ಮೇಲೂ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ತಿಳಿಸಿದ್ದೇನೆ. ಈ ಘಟನೆಯ ಹಿಂದೆ ಯಾರ ಪಿತೂರಿ ಇದೆ ಎನ್ನುವುದನ್ನು ಈ ಹಂತದಲ್ಲಿ ಹೇಳಲ್ಲ. ಇನ್ನೆರಡು ದಿನದಲ್ಲಿ ಶಿಕಾರಿಪುರಕ್ಕೆ ತೆರಳಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಶಿಕಾರಿಪುರದಲ್ಲಿ ಕೆಲ ಬಂಜಾರ ಸಮಾಜದ ಕಾರ್ಯಕರ್ತರು ನಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣ ಎಸ್ಪಿ, ಡಿಸಿ ಜೊತೆ ಮಾತನಾಡಿದ್ದೇನೆ. ಹಲವಾರು ವರ್ಷದಿಂದ ಸಮುದಾಯದ ಜನ ನಮ್ಮ ಜೊತೆಗೆ ಇದ್ದಾರೆ. ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿದೆ ಯಾರ ಮೇಲೂ ಕ್ರಮ ಬೇಡ ಎಂದಿದ್ದೇನೆ. ಶಾಂತ ರೀತಿಯಿಂದ ಸಮಸ್ಯೆ ಪರಿಹರಿಸಿ, ಯಾರನ್ನೂ ಬಂಧಿಸದೇ ಕಳಿಸಿಕೊಡಿ ತಿಳಿಸಿದ್ದೇನೆ ಎಂದರು.

ಸಮುದಾಯದವರಿಗೆ ಬಿಎಸ್​ವೈಯಿಂದ ಆಹ್ವಾನ:ಬಹುಶಃ ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಹಾಗಾಗಿ ಸಮುದಾಯದ ಹಿರಿಯ ಮುಖಂಡರನ್ನು ಕರೆದು ಮಾತನಾಡುತ್ತೇನೆ. ಈ ಘಟನೆ ಯಾಕೆ ಆಯಿತು ಎಂದು ಸಮಾಲೋಚನೆ ಮಾಡುತ್ತೇನೆ. ಬಂಜಾರ ಸಮಾಜದ ಸಮಸ್ಯೆ ಏನೇ ಇದ್ದರೂ ಚರ್ಚಿಸಲು ಸಿದ್ಧರಿದ್ದೇವೆ. ದಿನದ 24 ಗಂಟೆಯೂ ನಾನೂ ಹಾಗೂ ವಿಜಯೇಂದ್ರ ಚರ್ಚೆಗೆ ಸಿದ್ಧರಿದ್ದೇವೆ, ಬಂದು ಚರ್ಚಿಸಿ ಎಂದು ಬಿಎಸ್​ವೈ ಆಹ್ವಾನಿಸಿದರು.

ನಿಮ್ಮ ಜೊತೆಗಿದ್ದು ನ್ಯಾಯ ಒದಗಿಸುತ್ತೇನೆ:ಶಾಂತಿ ಸುವ್ಯವಸ್ಥೆಗೆ ಶಿಕಾರಿಪುರ ಜನ ಹೆಸರುವಾಸಿ, ಗಲಾಟೆ ಮಾಡುವ ಗುಣ ನಮ್ಮ ಕ್ಷೇತ್ರದ ಜನರಲ್ಲಿಲ್ಲ. ಸಮಾಜಘಾತಕ ಶಕ್ತಿಗಳ ಮಾತುಕೇಳಿ ತಪ್ಪು ಹೆಜ್ಜೆ ಇರಿಸಬೇಡಿ. ನಿಮ್ಮ ಜೊತೆ ಇದ್ದು ನಿಮಗೆ ನ್ಯಾಯ ಒದಗಿಸುತ್ತೇನೆ. ನಾಲ್ಕು ಬಾರಿ ಸಿಎಂ ಆಗಲು ಬಂಜಾರ ಸಮುದಾಯ ಕೊಡುಗೆ ಇದೆ. ನಾಳೆ ನಾಡಿದ್ದರಲ್ಲಿ ಸ್ಥಳಕ್ಕೆ ಹೋಗಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಏನೇ ತಪ್ಪಾಗಿದ್ದರೂ ಸರಿಪಡಿಸಲಾಗುತ್ತದೆ ಎಂದರು.

ಬಂಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ:ತಾಂಡಾ ಅಭಿವೃದ್ಧಿ ಪಡಿಸಲು ಸಾಕಷ್ಟು ವರ್ಷದಿಂದ ಕೆಲಸ ಮಾಡಿದ್ದೇನೆ. ಬಂಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಈ ರೀತಿಯ ಅಹಿತಕರ ಘಟನೆಗೆ ಅವಕಾಶವನ್ನು ಯಾವ ಸಮಾಜವೂ ನೀಡಬಾರದು. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ಹೋಗಿ ಸಮಸ್ಯೆ ತಿಳಿಯುವ ಪ್ರಯತ್ನ ಮಾಡುತ್ತೇನೆ. ಸಮುದಾಯದ ಮುಖಂಡರು ಮುಖ್ಯಮಂತ್ರಿ ಜೊತೆಗೆ ಮಾತನಾಡಿ, ಬೇಕಾದರೆ ನಾನೂ ನಿಮ್ಮ ಜೊತೆ ಬರಲಿದ್ದೇನೆ. ಶಿಕಾರಿಪುರ ಶಾಂತಿಯುತ ತಾಲ್ಲೂಕು, ನಾಲ್ಕೈದು ದಶಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಏಕಾಏಕಿ ಇಂತಹ ಘಟನೆ ನಡೆದಿದೆ. ಹಾಗಾಗಿ ಸ್ವಲ್ಪ ನೋವಾಯಿತು. ತಕ್ಷಣವೇ ಡಿಸಿ, ಎಸ್ಪಿಗೆ ಸೂಚಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಿಳಿಸಿದ್ದೇವೆ. ಅವರು ಸ್ಥಳದಲ್ಲಿದ್ದಾರೆ. ಎಲ್ಲ ನಿಯಂತ್ರಣದಲ್ಲಿದೆ ಯಾರನ್ನೂ ಬಂಧಿಸದಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ನಾನು ಯಾರ ಮೇಲೂ ಆರೋಪ ಮಾಡಲ್ಲ:ನಮ್ಮ ನಿವಾಸದ ಮೇಲಿನ ಕಲ್ಲು ತೂರಾಟದ ಘಟನೆಯ ಹಿಂದೆ ಯಾರದೇ ಕುಮ್ಮಕ್ಕಿದೆ ಎಂದು ನಾನು ಹೇಳಲ್ಲ. ನಾನು ಸ್ಥಳಕ್ಕೆ ಹೋಗಿ ನೋಡಿದ ನಂತರ ಎಲ್ಲದರ ಬಗ್ಗೆ ಹೇಳುತ್ತೇನೆ. ಈಗ ಯಾರ ಮೇಲೂ ನಾನು ಆರೋಪ ಮಾಡಲ್ಲ. ಕೇಂದ್ರ ಸಚಿವ ನಾರಾಯಣಸ್ವಾಮಿ ಕಾಂಗ್ರೆಸ್ ಕೈವಾಡ ಎಂದಿರುವುದು ಸರಿಯಲ್ಲ. ಇಂತಹ ಹೇಳಿಕೆ ನೀಡದಂತೆ ಹೇಳುತ್ತೇನೆ. ಸಹಜವಾಗಿ ಈ ಘಟನೆ ಆಗಬಾರದಿತ್ತು. ಯಾರದ್ದೋ ಕೈವಾಡ ಎನ್ನುವ ಅನುಮಾನ ಸಹಜ. ಆದರೆ, ನಾನಂತೂ ಯಾರ ಮೇಲೂ ಆರೋಪ ಮಾಡಲ್ಲ ಎಂದು ಸಮಾಧಾನವಾಗಿಯೇ ಉತ್ತರಿಸಿದರು.

ಮೀಸಲಾತಿ ವಿಚಾರದಲ್ಲಿ ಸಮುದಾಯದವರ ಸಮಸ್ಯೆ ಏನೇ ಇರಲಿ. ಅವರು ಬಂದು ಸಿಎಂ ಜೊತೆ ಮಾತನಾಡಲಿ, ಲೋಪವಾಗಿದ್ದರೆ ಅವರು ಸರಿಪಡಿಸಲಿದ್ದಾರೆ. ಹಾಗಾಗಿ ಅವರು ಬಂದು ಮಾತನಾಡಲಿ. ಒಳ ಮೀಸಲಾತಿ ಬಗ್ಗೆ ಸಿಎಂ ತೆಗೆದುಕೊಂಡಿರುವ ತೀರ್ಮಾನವನ್ನು ಶೇ. 90ರಷ್ಟು ಜನರಿಂದ ಸ್ವಾಗತ ಸಿಕ್ಕಿದೆ. ಉಳಿದದ್ದರಲ್ಲಿ ಲೋಪದೋಶ ಇದ್ದರೆ ಸರಿಪಡಿಸಲಿದ್ದಾರೆ ಎಂದರು.

ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿದೆ. ಯಾರೂ ನನ್ನ ಟಾರ್ಗೆಟ್ ಮಾಡಿಲ್ಲ. ಸಮುದಾಯದ ಮುಖಂಡರ ಕರೆಸಿ ಮಾತುಕತೆ ನಡೆಸಲಿದ್ದೇನೆ. ಸುರ್ಜೇವಾಲಾ ಅವರು, ಬಿಜೆಪಿಯವರೇ ಪಿತೂರಿ ಮಾಡಿದ್ದಾರೆ ಎಂದಿದ್ದಾರೆ. ಆದರೆ, ನಾನು ಯಾರ ಮೇಲೂ ಬೆರಳು ಮಾಡುವುದಿಲ್ಲ. ಈ ಘಟನೆಯಲ್ಲಿ ಯಾರ ಕೈವಾಡ ಇಲ್ಲ, ತಪ್ಪು ಗ್ರಹಿಕೆಯಿಂದ ಆಗಿರಬಹುದು ಎಂದರು.

ಇದನ್ನೂ ಓದಿ:ಒಳ ಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ‌ ಮನೆ ಮೇಲೆ ಕಲ್ಲು ತೂರಾಟ

ABOUT THE AUTHOR

...view details