ಕರ್ನಾಟಕ

karnataka

ETV Bharat / state

ಇನ್ನೂ ಬಿಚ್ಚಿಕೊಳ್ಳದ ಕಾಂಗ್ರೆಸ್ ಸಿಎಂ ಆಯ್ಕೆ ಕಗ್ಗಂಟು: ದೆಹಲಿಯಲ್ಲಿ ಮುಂದುವರಿದ ಕಸರತ್ತು - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದಿಲ್ಲ. ದೆಹಲಿಯಲ್ಲಿ ಆಯ್ಕೆ ಕಸರತ್ತು ಮುಂದುವರಿದಿದೆ.

ದೆಹಲಿಯಲ್ಲಿ ಹೈಡ್ರಾಮಾ ಮುಂದುವರಿಕೆ
ದೆಹಲಿಯಲ್ಲಿ ಹೈಡ್ರಾಮಾ ಮುಂದುವರಿಕೆ

By

Published : May 17, 2023, 5:32 PM IST

Updated : May 17, 2023, 5:51 PM IST

ಇನ್ನೂ ಬಿಚ್ಚಿಕೊಳ್ಳದ ಕಾಂಗ್ರೆಸ್ ಸಿಎಂ ಆಯ್ಕೆ ಕಗ್ಗಂಟು

ನವದೆಹಲಿ:ಸತತ ನಾಲ್ಕು ದಿನಗಳಿಂದ ನಡೆಯುತ್ತಿರುವ "ಕರ್ನಾಟಕದ ಮುಂದಿನ ಸಿಎಂ" ಯಾರೆಂಬ ಕಸರತ್ತಿಗೆ ಇಂದು ಕೂಡ ಉತ್ತರ ಸಿಕ್ಕಿಲ್ಲ. ಬೆಳಗ್ಗೆಯಿಂದಲೂ ಸಿಎಂ ಆಯ್ಕೆಗಾಗಿ ಸರಣಿ ಸಭೆಗಳು ನಡೆಯುತ್ತಿದ್ದು, ಕಸರತ್ತು ಮುಂದುವರಿದಿದೆ.

ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರನ್ನು ಪಕ್ಷದ ನಾಯಕ ರಾಹುಲ್​ ಗಾಂಧಿ ಅವರ ನಿವಾಸದಲ್ಲಿ ಭೇಟಿ ಮಾಡಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಚರ್ಚಿಸಿ ವಾಪಸ್​ ತೆರಳಿದರೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.

ಪಟ್ಟು ಸಡಿಲಿಸದ ನಾಯಕರು:ಸಿಎಂ ಸ್ಥಾನದ ಪ್ರಬಲ ಸ್ಪರ್ಧಿಗಳಾಗಿರುವ ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ತಮ್ಮ ಪಟ್ಟನ್ನು ಮಾತ್ರ ಯಾವ ಕಾರಣಕ್ಕೂ ಸಡಿಲ ಮಾಡುತ್ತಿಲ್ಲ. ಇಬ್ಬರೂ ತಮ್ಮನ್ನು ಸಿಎಂ ಮಾಡಲೇಬೇಕು ಎಂದು ಹಠ ಹಿಡಿದವರಂತೆ ಹೈಕಮಾಂಡ್​ ಎದುರು ವಾದ ಮಂಡಿಸುತ್ತಿದ್ದಾರೆ. ಉಭಯ ನಾಯಕರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ರಾಹುಲ್​ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಮನವೊಲಿಸಲು ಯತ್ನಿಸಿದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ.

ಸಿದ್ದರಾಮಯ್ಯ ಸಿಎಂ ವದಂತಿ:ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ವಾಪಸ್​ ಬಂದ ಬಳಿಕ ಅವರನ್ನೇ ಸಿಎಂ ಆಗಿ ಹೈಕಮಾಂಡ್​ ಒಪ್ಪಿಕೊಂಡಿದೆ ಎಂಬ ಸುದ್ದಿ ಹರಡಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಭಿತ್ತರವಾಗುತ್ತಿದ್ದಂತೆಯೇ ಮಾಜಿ ಸಿಎಂ ಬೆಂಬಲಿಗರು ಮತ್ತು ಕೆಲ ಪಕ್ಷದ ಕಾರ್ಯಕರ್ತರು ಬೆಂಗಳೂರು, ಮೈಸೂರಿನಲ್ಲಿ ಸಂಭ್ರಮಾಚರಣೆ ನಡೆಸಿದ್ದರು.

ದೆಹಲಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ್​ ಅವರು ಸುದ್ದಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಹೈಕಮಾಂಡ್​ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಘೋಷಿಸಲಿದೆ. ನಾಳೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದರು. ಇದು ಸಿದ್ದರಾಮಯ್ಯ ಬೆಂಬಲಿಗರ ಹರ್ಷಕ್ಕೆ ಕಾರಣವಾಗಿತ್ತು.

ಇದಾದ ಬಳಿಕ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ ಕಾರ್ಯವೂ ಆರಂಭವಾಗಿತ್ತು. ಆದರೆ, ಈವರೆಗೂ ಹೈಕಮಾಂಡ್​ ಯಾವುದೇ ಅಧಿಕೃತ ಹೇಳಿಕೆ ನೀಡದ ಕಾರಣ ಕಾರ್ಯಕ್ರಮದ ಸಿದ್ಧತೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಸುರ್ಜೇವಾಲಾ ಹೇಳಿಕೆ:ಇನ್ನೂ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ರಣದೀಪ್​ ಸುರ್ಜೇವಾಲಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರ ಜೊತೆಗೆ ಮಾತುಕತೆ ನಡೆಯುತ್ತಿದೆ. ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಕಸರತ್ತು ಇನ್ನೂ ಜಾರಿಯಲ್ಲಿದೆ. ಸದ್ಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿದರು.

ಮುಂದಿನ ಸಿಎಂ ಬಗ್ಗೆ ಪಕ್ಷ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನಿರ್ಧಾರ ಕೈಗೊಂಡು ಶೀಘ್ರವೇ ತಿಳಿಸಲಾಗುವುದು. ಮುಂದಿನ 48- 72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಅವರು ಹೇಳಿದರು.

ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ:ರಾಹುಲ್​ ಗಾಂಧಿ ಅವರ ಜೊತೆಗೆ ಮಾತುಕತೆ ನಡೆಸಿ ಸಂಸದ ಡಿ ಕೆ ಸುರೇಶ್ ಅವರ ಕಚೇರಿಗೆ ಬಂದ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೇಜಾರಿನಿಂದಲೇ ಉತ್ತರಿಸಿದ ಡಿ ಕೆ ಶಿವಕುಮಾರ್​ ಅವರು, ಸಿಎಂ ಯಾರೆಂಬ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಭಿತ್ತರಿಸಲಾಗುತ್ತಿದೆ. ಯಾರೋ ಫ್ರಾಡ್​ಗಳು ನೀಡಿದ ಮಾಹಿತಿಯಿಂದ ಮಾಧ್ಯಮಗಳು ಸುಳ್ಳು ಮಾಹಿತಿ ನೀಡುತ್ತಿವೆ ಎಂದು ಅವರು ಹೇಳಿದರು.

ಓದಿ:ಮುಂದಿನ 48 - 72 ಗಂಟೆಗಳಲ್ಲಿ ಸಚಿವ ಸಂಪುಟ ರಚನೆ: ಇನ್ನೂ ಯಾವುದೂ ಅಂತಿಮವಾಗಿಲ್ಲ... ಸುರ್ಜೇವಾಲಾ

Last Updated : May 17, 2023, 5:51 PM IST

ABOUT THE AUTHOR

...view details