ಬೆಂಗಳೂರು:ಕೊರೊನಾ ಸೋಂಕು ಆವರಿಸಿದ ಬಳಿಕ ಎಲ್ಲಾ ರಂಗದ ಆರ್ಥಿಕ ಚಟುವಟಿಕೆಗಳು ಮಂಕಾಗಿವೆ. ಉದ್ಯೋಗದಾತರು ನಷ್ಟಕ್ಕೆ ಸಿಲುಕಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ. ಹಾಗೆಂದು ಉದ್ಯೋಗವೇ ಇಲ್ಲವೆಂದಲ್ಲ, ನುರಿತ ಹಾಗೂ ಕೌಶಲಭರಿತ ಕೆಲಸಗಾರರಿಗೆ ಈಗಲೂ ಬೇಡಿಕೆ ಇದೆ. ಆದರೆ, ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಉದ್ಯೋಗ ಕೊಡಿಸುವಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ವಿಫಲವಾಗಿವೆ.
ಉತ್ಪನ್ನ ಮತ್ತು ಸೇವೆಗಳ ಬೇಡಿಕೆಯೂ ಕುಸಿದಿರುವುದರಿಂದ ಉದ್ದಿಮೆ ಹಾಗೂ ಕೈಗಾರಿಕೆಗಳು ಸಹಜವಾಗಿಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮವಾಗಿ ಉದ್ಯೋಗಿಗಳ ಸಂಖ್ಯೆ ಹೆಚ್ಚುವ ಬದಲು ಉದ್ಯೋಗ ಕಳೆದುಕೊಳ್ಳುವರ ಸಂಖ್ಯೆಯೇ ಹೆಚ್ಚಾಗಿದೆ. ಈಗಷ್ಟೇ ಕಲಿಕೆ ಪೂರೈಸಿ ಹೊರಬರುವ ಪದವೀಧರರಿಗಂತೂ ಉದ್ಯೋಗ ಕನಸಿನ ಮಾತು ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ...ಮೋದಿಯವರ ಹೂಡಿಕೆ ಸ್ನೇಹಿ ಆಡಳಿತದಿಂದ FDI ಪ್ರಮಾಣ 28.1 ಶತಕೋಟಿ ಡಾಲರ್ಗೆ ತಲುಪಿದೆ: ಗೋಯಲ್
ಕೊರೊನಾ ಭಯ:ಶೈಕ್ಷಣಿಕ ಅರ್ಹತೆ, ಕುಶಲತೆ, ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳಿಗೆ ಅನುಗುಣವಾಗಿ ಯುವಕರನ್ನು ನೋಂದಾಯಿಸಿಕೊಂಡು ತರಬೇತಿ ನೀಡಿ ಉದ್ಯೋಗ ಕೊಡಿಸಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ವಿನಿಯಮ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳು ಹಿಂದೆ ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿದ್ದವು. ಸರ್ಕಾರ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತ್ಯೇಕ ಇಲಾಖೆ ಸೃಜಿಸಿದೆ. 2016ರಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಈ ಕೇಂದ್ರಗಳನ್ನು ತಂದು ಯುವಕರ ಶೈಕ್ಷಣಿಕ ಅರ್ಹತೆ ಮೇರೆಗೆ ಅವರ ಕೌಶಲಗಳನ್ನು ಹೆಚ್ಚಿಸಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತಿದೆ.
ಆದರೆ, ಕೊರೊನಾ ಬಂದ ಬಳಿಕ ಈ ಎಲ್ಲ ಕೇಂದ್ರಗಳು ತಣ್ಣಗಾಗಿವೆ. ಸೋಂಕಿನ ಭಯಕ್ಕೆ ಸಿಲುಕಿರುವ ಅಧಿಕಾರಿಗಳು ಮಾರ್ಚ್ನಿಂದ ಈವರೆಗೂ ಒಂದೇ ಒಂದು ಉದ್ಯೋಗ ಮೇಳವನ್ನೂ ನಡೆಸಿಲ್ಲ. ಹಿಂದಿನ ವರ್ಷಗಳಲ್ಲಿ ಜಿಲ್ಲಾವಾರು ಉದ್ಯೋಗ ವಿನಿಮಯ ಕೇಂದ್ರಗಳು ಖಾಸಗಿ ಕಂಪನಿಗಳ ಸಹಯೋಗದಲ್ಲಿ ಮೇಳ ನಡೆಸುತ್ತಿದ್ದವು. ಇದರಲ್ಲಿ ಭಾಗವಹಿಸುತ್ತಿದ್ದ ಉದ್ಯೋಗಾಕಾಂಕ್ಷಿಗಳು ತಮ್ಮ ಸಾಮರ್ಥ್ಯಾನುಸಾರ ಕೆಲಸ ಗಿಟ್ಟಿಸುತ್ತಿದ್ದರು. ಆದರೆ, ಪ್ರಸಕ್ತ ವರ್ಷ ಉದ್ಯೋಗದಾತ ಸಂಸ್ಥೆಗಳು ನೇಮಕಾತಿ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ಕೂಡ ನಿಷ್ಕ್ರಿಯವಾಗಿವೆ.