ಬೆಂಗಳೂರು :ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಶಾಸಕ ಸುಕುಮಾರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಗ್ರಾಮೀಣ ರಸ್ತೆಗಳಿವೆ. ಇದರಲ್ಲಿ ಈಗಾಗಲೇ ಒಂದೂವರೆ ಲಕ್ಷ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಉಳಿದಿರುವ ರಸ್ತೆಗಳನ್ನ ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಸಡಕ್ ಯೋಜನೆಯಡಿ ಅನುದಾನದ ಲಭ್ಯತೆ ಮೇಲೆ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಸಂಸ್ಥೆಗಳಡಿ ರಸ್ತೆಗಳ ಡಾಂಬರೀಕರಣ ಮತ್ತಿತರ ಕಾಮಗಾರಿಗಳನ್ನು ನಡೆಸುತ್ತಿದ್ದೇವೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನಲ್ಲೂ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವೇಳೆ ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ ಮಾತನಾಡಿ, ನನ್ನ ಮತ ಕ್ಷೇತ್ರದಲ್ಲಿ ಕಳೆದ ಐದು ವಷಗಳಿಂದ ರಸ್ತೆಗಳ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.