ಬೆಂಗಳೂರು :ಗಣಿ ಬಾಧಿತ ಜಿಲ್ಲೆಗಳಲ್ಲಿ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯದಲ್ಲಿ, ಸಮಗ್ರ ಪರಿಸರ ಯೋಜನೆಯಡಿ ಸುಪ್ರೀಂಕೋರ್ಟ್‌ನಲ್ಲಿರುವ ಅನುದಾನವನ್ನು ಬಳಸಿಕೊಳ್ಳಲು ಸರ್ಕಾರ ಹಿರಿಯ ವಕೀಲರನ್ನು ನೇಮಕ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಡಿ ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಸುಪ್ರೀಂಕೋರ್ಟ್‌ನಲ್ಲಿ ಸುಮಾರು 20 ರಿಂದ 23 ಸಾವಿರ ಕೋಟಿ ರೂ. ಅನುದಾನ ಲಭ್ಯವಿದೆ.
ಇದನ್ನು ಜಿಲ್ಲೆಗಳ ಅಭಿವೃದ್ದಿಗೆ ಬಳಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮುಂದುವರೆಸಿದೆ. ಈ ಅನುದಾನವನ್ನು ಬಳಸಿಕೊಳ್ಳಲು ನ್ಯಾಯಾಲಯದ ಅನುಮತಿ ಬೇಕು. ಅನೇಕ ಬಾರಿ ನಾವು ನಮ್ಮ ವಕೀಲರ ಮೂಲಕ ಮನವಿ ಮಾಡಿದರೂ ನ್ಯಾಯಾಲಯ ನಮ್ಮ ಅರ್ಜಿಯನ್ನೇ ಕೈಗೆತ್ತಿಕೊಂಡಿಲ್ಲ. ಈಗ ಹೊಸ ಹಿರಿಯ ವಕೀಲರನ್ನು ನೇಮಕ ಮಾಡಲಿದ್ದೇವೆ. ಏಪ್ರಿಲ್ ತಿಂಗಳಿನಲ್ಲಿ ವಿಚಾರಣೆ ಹಂತಕ್ಕೆ ಬರಬಹುದು ಎಂದು ಹೇಳಿದರು.
ಕೆಲವರು 19 ಸಾವಿರ ಕೋಟಿ ಎನ್ನುತ್ತಾರೆ, ಇನ್ನು ಕೆಲವರು 23 ಸಾವಿರ ಕೋಟಿ ಅಂತಿದ್ದಾರೆ. ಈ ಅನುದಾನ ನಮಗೆ ಸಿಕ್ಕರೆ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ತಜ್ಞರು ಮತ್ತಿತರರ ಜೊತೆ ಚರ್ಚೆ ನಡೆಸಿದ್ದೇವೆ. ಹೊಸ ವಕೀಲರನ್ನು ನೇಮಿಸಿ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ ಎಂದರು.
ಇದಕ್ಕೂ ಮುನ್ನ ಶಾಸಕರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರು, ಗಣಿ ಬಾಧಿತ ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ಅಭಿವೃದ್ಧಿ ನಿಗಮ ವತಿಯಿಂದ ಎಲ್ಲ ಕ್ರಮಕೈಗೊಳ್ಳಬಹುದು.
21-03-2018ರ ಆದೇಶದಂತೆ ಬಳ್ಳಾರಿ, ತುಮಕೂರು, ಚಿತ್ರದುರ್ಗ ಈ ಮೂರು ಜಿಲ್ಲೆಗಳಲ್ಲಿ ಸಾಮಾಜಿಕ ಮತ್ತು ಅಭಿವೃದ್ದಿಗೆ ಪೂರಕವಾದ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳ ಸಮಗ್ರ ಪರಿಸರ ಯೋಜನೆಯನ್ನು ತಯಾರಿಸಿ ನ್ಯಾಯಾಲಯದ ಅನುಮೋದನೆಗೆ ಕಳುಹಿಸಲಾಗಿತ್ತು. ಇದರ ನಡುವೆ ಸಮಾಜ ಪರಿವರ್ತನಾ ಸಮುದಾಯದವರು ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದರು.