ಬೆಂಗಳೂರು :ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಆರ್ಎಸ್ಎಸ್ ಕಾರ್ಯಕರ್ತರ ಹೆಸರಿನಲ್ಲಿ ಅಪಹರಿಸಿದ್ದ ಘಟನೆ ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಮದ್ ಎನ್ನುವಾತ ಮೂವರು ಯುವಕರನ್ನು ಬಿಟ್ಟು ಗೋಮಾಂಸ ಸಾಗಿಸುತ್ತಿದ್ದ ಜಾವೀದ್ ಎನ್ನುವಾತನನ್ನು ಗಾಡಿ ಸಮೇತ ಕಿಡ್ನಾಪ್ ಮಾಡಿಸಿದ್ದಾನೆ. ಈ ಬಗ್ಗೆ ದೂರು ದಾಖಲಾದ ಬಳಿಕ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ.
ಸೆಪ್ಟೆಂಬರ್ 10ರಂದು ಮಹಮದ್ ಎಂಬಾತನ ಅಂಗಡಿಗೆ ಜಾವೀದ್ ಗೋಮಾಂಸ ತುಂಬಿಕೊಂಡು ರಾಮನಗರದಿಂದ ಬೆಂಗಳೂರಿನ ತಿಲಕನಗರಕ್ಕೆ ಬರುತ್ತಿದ್ದ. ಗೋಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿಗೆ ಡೆಲವರಿ ಮಾಡಲು ಬರುತ್ತಿದ್ದ ಜಾವೀದ್ನನ್ನು ಮೈಕೋ ಲೇಔಟ್ ಸಿಗ್ನಲ್ ಬಳಿ ಅಡ್ಡಗಟ್ಟಿದ್ದ ಮೂವರು ಆರೋಪಿಗಳು, ತಾವು ಆರ್ಎಸ್ಎಸ್ ಕಾರ್ಯಕರ್ತರು ಎಂದು ಹೇಳಿದ್ದಾರೆ. ಬಳಿಕ ಗಾಡಿ ಸಮೇತ ಜಾವೀದ್ನನ್ನು ಅಪಹರಿಸಿದ್ದರು.
ನಂತರ ಒಂದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ ಹತ್ತು ಸಾವಿರ ಪಡೆದು ಜಾವೀದ್ನನ್ನು ಬಿಟ್ಟು ಕಳುಹಿಸಿದ್ದಾರೆ. ಸೇಂಟ್ ಜಾನ್ ಸಿಗ್ನಲ್ ಬಳಿ ಗಾಡಿ ಇದೆ ತೆಗೆದುಕೋ ಎಂದು ಹೇಳಿ ಕಳುಹಿಸಿದ್ದರು. ಅದರಂತೆ ಜಾವೀದ್ ತನ್ನ ವಾಹನದ ಬಳಿ ಹೋದಾಗ ಅದರಲ್ಲಿದ್ದ ಗೋಮಾಂಸ ಇರಲಿಲ್ಲ. ಬಳಿಕ ಈ ಬಗ್ಗೆ ಜಾವೀದ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಆಡುಗೋಡಿ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರ್ಎಸ್ಎಸ್ ಹೆಸರಿನಲ್ಲಿ ಗೋಮಾಂಸ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಅಂಗಡಿ ಮಾಲೀಕನಿಂದಲೇ ಸಂಚು : ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಂಗಡಿ ಮಾಲೀಕ ಮಹಮದ್ ಗೋಮಾಂಸ ಕಳ್ಳತನದ ಸಂಚು ರೂಪಿಸಿರುವುದು ಬಯಲಾಗಿದೆ. ಜಾವೀದ್ ಡೆಲವರಿ ಮಾಡಬೇಕಿದ್ದ ಗೋಮಾಂಸದ ಅಂಗಡಿಯ ಮಾಲೀಕನೇ ಕಿಡ್ನಾಪ್ ಮಾಡಿಸಿದ್ದು ಎನ್ನುವುದು ಗೊತ್ತಾಗಿದೆ. ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ ಮಹಮದ್, ನಂತರ ಮಾಂಸ ಡೆಲವರಿಯಾಗಿಲ್ಲ ಎಂದು ಸುಳ್ಳು ಹೇಳಿದ್ದ. ಆದರೆ ತನಿಖೆ ವೇಳೆ ಅಸಲಿ ಕಹಾನಿ ಬೆಳಕಿಗೆ ಬಂದಿದ್ದು, ಗೋಮಾಂಸ ಕದಿಯಲೆಂದೇ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ವ್ಯಕ್ತಿ ರಕ್ಷಿಸಿದ ಕಾನ್ಸ್ಟೇಬಲ್ಸ್(ಪ್ರತ್ಯೇಕ ಪ್ರಕರಣ):ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿ ಹಲ್ಲೆಗೊಳಗಾಗುತ್ತಿದ್ದ ಘಟನೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಬಳಿ (ಅಕ್ಟೋಬರ್ 13 -2022) ನಡೆದಿತ್ತು. ಈ ವೇಳೆ ಸಮಯಕ್ಕೆ ಸರಿಯಾಗಿ ಬಂದ 112 ವಾಹನದ ಪೊಲೀಸ್ ಕಾನ್ಸ್ಟೇಬಲ್ಸ್ ವ್ಯಕ್ತಿಯ ಪ್ರಾಣ ಉಳಿಸಿ, ಗಲಬೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಗಲಭೆ ನಿಯಂತ್ರಿಸಿದ ಪೊಲೀಸರನ್ನ ಪ್ರಶಂಸಿಸಲಾಗಿತ್ತು.
ಸೆಪ್ಟೆಂಬರ್ 17ರ ರಾತ್ರಿ 11 ಗಂಟೆ ಸಮಯದಲ್ಲಿ ಬೆಂಗಳೂರಿನ ಹಿದಾಯತ್ ಉಲ್ಲಾ ಎಂಬ ವ್ಯಕ್ತಿ ಬೈಕ್ನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ. ಹಿಂದೂಪುರದಿಂದ ಬೆಂಗಳೂರಿಗೆ ಗೋಮಾಂಸ ಸಾಗಿಸುವ ವೇಳೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಬಳಿ ಬೈಕ್ ನಿಯಂತ್ರಣ ತಪ್ಪಿ ಬೈಕ್ನಿಂದ ಕೆಳಗೆ ಬಿದ್ದಿದ್ದ. ಆಗ ಚೀಲದಲ್ಲಿದ್ದ ಗೋಮಾಂಸ ರಸ್ತೆಯಲ್ಲಿ ಬಿದ್ದಿತ್ತು. ಗೋಮಾಂಸ ಸಾಗಾಟದ ಸುದ್ದಿ ಮಿಂಚಿನಂತೆ ಹರಡಿ, ಸ್ಥಳದಲ್ಲಿ 200 ಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಗೋಮಾಂಸ ಸಾಗಿಸುತ್ತಿದ್ದ ಬೈಕ್ಗೆ ಬೆಂಕಿ ಇಟ್ಟು, ಸಾರ್ವಜನಿಕರು ಹಿದಾಯತ್ ಉಲ್ಲಾನ ಮೇಲೆ ಹಲ್ಲೆಗೂ ಮುಂದಾಗಿದ್ದರು.
ಇದನ್ನೂ ಓದಿ:ಬೈಕ್ನಲ್ಲಿ ಗೋಮಾಂಸ ಸಾಗಾಟ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ವ್ಯಕ್ತಿ ರಕ್ಷಿಸಿದ ಕಾನ್ಸ್ಟೇಬಲ್ಸ್