ಬೆಂಗಳೂರು:ರಾಜ್ಯ ಸರ್ಕಾರ ಈ ಬಾರಿ ಬಜೆಟ್ ಮಂಡನೆ ವೇಳೆಯಲ್ಲೇ ಹೆಚ್ಚಿನ ಸಾಲದ ಮೊರೆ ಹೋಗುವುದಾಗಿ ತಿಳಿಸಿತ್ತು. ಇದೀಗ ಆರ್ಥಿಕ ವರ್ಷದ ಆರು ತಿಂಗಳು ಕಳೆದಿದ್ದು, ಈವರೆಗೆ ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲದ ಸ್ಥಿತಿಗತಿಯ ವರದಿ ಇಲ್ಲಿದೆ.
ಸರ್ಕಾರವು ವಿವಿಧ ಯೋಜನೆಗಳಿಗಾಗಿ ಆದಾಯ ಕ್ರೋಢೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸರ್ಕಾರಕ್ಕೆ ಆರೋಗ್ಯಕರ ಹಣಕಾಸು ನಿರ್ವಹಣೆ ದೊಡ್ಡ ಸವಾಲಿನ ವಿಚಾರವಾಗಿದ್ದು, ಒಂದೆಡೆ ಅಭಿವೃದ್ಧಿ ಕುಂಠಿತವಾಗಬಾರದು. ಇತ್ತ ಎಲ್ಲ ಯೋಜನೆಗಳಿಗೂ ಹಣಕಾಸು ಕೊರತೆ ಆಗದಂತೆಯೂ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿಯ ಹಣಕಾಸು ನಿರ್ವಹಣೆಗಾಗಿ ಕಾಂಗ್ರೆಸ್ ಸರ್ಕಾರ ಸಾಲವನ್ನು ಬಹುವಾಗಿ ನೆಚ್ಚಿಕೊಂಡಿದೆ. ಇದಕ್ಕಾಗಿ 2023-24ರ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಸಾಲದ ಮೊರೆ ಹೋಗಿದ್ದರು.
2023-24ರಲ್ಲಿ ಸಾಲದ ಹೊರೆ:ಸಿಎಂ ಸಿದ್ದರಾಮಯ್ಯ ಅವರು ಜುಲೈನಲ್ಲಿ ಮಂಡಿಸಿದ ಬಜೆಟ್ನಲ್ಲಿ 2023-24ರ ಸಾಲಿನಲ್ಲಿ ಒಟ್ಟು ಅಂದಾಜು 85,818 ಕೋಟಿ ಸಾಲ ಮಾಡಲು ನಿರ್ಧರಿಸಿದೆ. ಈ ಹಿಂದೆ ಬೊಮ್ಮಾಯಿ ಮಂಡಿಸಿದ್ದ ಬಜೆಟ್ನಲ್ಲಿ 2023-24ರಲ್ಲಿ ಅಂದಾಜು 77,750 ಕೋಟಿ ಸಾಲ ಮಾಡುವುದಾಗಿ ತಿಳಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಹೊಸ ಬಜೆಟ್ನಲ್ಲಿ ಒಟ್ಟು ಸಾಲದ ಮೊತ್ತವನ್ನು 85,818 ಕೋಟಿ ರೂ.ಗೆ ಏರಿಕೆ ಮಾಡಿದೆ.
ಈ ಬಾರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಮಾಡಲು ಅಂದಾಜಿಸಿದೆ. ಇನ್ನು ಬಹಿರಂಗ ಮಾರುಕಟ್ಟೆ ಮೂಲಕ 78,363 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಇನ್ನು ಎನ್ಎಸ್ಎಸ್ಎಫ್, ಎನ್‌ಸಿಡಿಸಿ, ಆರ್ಐಡಿಎಫ್ ಮೂಲಕ 1,201 ಕೋಟಿ ರೂ. ಸಾಲ ಮಾಡಲು ನಿರ್ಧರಿಸಲಾಗಿದೆ.
ಆರು ತಿಂಗಳಲ್ಲಿ ಮಾಡಿದ ಸಾಲವೆಷ್ಟು?:ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಕಳೆದ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಸಾಲದ ಮೂಲಕ ಸುಮಾರು 1,000 ಕೋಟಿ ರೂ. ಎತ್ತುವಳಿ ಮಾಡಿದೆ. ಆರು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲದ ಮೊರೆ ಹೋಗಿಲ್ಲ. ಸಾಮಾನ್ಯವಾಗಿ ಸರ್ಕಾರ ಆರ್ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಬಹಿರಂಗ ಮಾರುಕಟ್ಟೆಯಿಂದ ಬಹುಪಾಲು ಸಾಲ ಎತ್ತುವಳಿ ಮಾಡುತ್ತದೆ. ಆದರೆ ಅಚ್ಚರಿ ಎಂದರೆ ರಾಜ್ಯ ಸರ್ಕಾರ ಆರ್ಥಿಕ ವರ್ಷದ ಎರಡು ತ್ರೈಮಾಸಿಕದಲ್ಲೂ ಆರ್ಬಿಐ ಮೂಲಕ ಯಾವುದೇ ಸಾಲ ಎತ್ತುವಳಿ ಮಾಡಿಲ್ಲ.
ಆರ್ಥಿಕ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಇತರೆ ಸಾರ್ವಜನಿಕ ಸಾಲವಾಗಿ ಏಪ್ರಿಲ್ನಲ್ಲಿ 262.40 ಕೋಟಿ ರೂ. ಸಾಲ ಮಾಡಿತ್ತು. ಮೇ ತಿಂಗಳಲ್ಲಿ 181.42 ಕೋಟಿ ರೂ. ಸಾಲ ಮಾಡಿದ್ದರೆ, ಜೂನ್ನಲ್ಲಿ 158.47 ಕೋಟಿ ರೂ. ಸಾಲ ಮಾಡಲಾಗಿದೆ. ಜುಲೈನಲ್ಲಿ 40.73 ಕೋಟಿ ರೂ. ಮಾತ್ರ ಸಾರ್ವಜನಿಕ ಸಾಲ ಮಾಡಿತ್ತು. ಆಗಸ್ಟ್ ತಿಂಗಳಲ್ಲಿ 228.02 ಕೋಟಿ ರೂ. ಸಾಲ ಮಾಡಿದ್ದರೆ, ಸೆಪ್ಟೆಂಬರ್ನಲ್ಲಿ ಸುಮಾರು 235 ಕೋಟಿ ರೂ. ಸಾಲ ಮಾಡಲಾಗಿತ್ತು.
ಪ್ರಸಕ್ತ ತ್ರೈಮಾಸಿಕದಲ್ಲಿ 30,000 ಕೋಟಿ ಸಾಲದತ್ತ ಚಿತ್ತ:ಪ್ರಸಕ್ತ ಮೂರನೇ ತ್ರೈಮಾಸಿಕ ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಿಂದ ರಾಜ್ಯ ಅಭಿವೃದ್ಧಿ ಸಾಲವಾಗಿ ಸುಮಾರು 30,000 ಕೋಟಿ ಸಾಲಕ್ಕೆ ಮುಂದಾಗಿದೆ. ಆರ್ಬಿಐಗೆ ರಾಜ್ಯ ಸರ್ಕಾರ ನೀಡಿದ ಪೂರ್ವ ಸೂಚನೆಯಂತೆ ಪ್ರಸಕ್ತ ತ್ರೈಮಾಸಿಕದಲ್ಲಿ ಸುಮಾರು 30,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿದೆ. ಅಕ್ಟೋಬರ್ 17ರಂದು ರಾಜ್ಯ ತನ್ನ ಸಾಲ ಎತ್ತುವಳಿ ಆರಂಭಿಸಲು ಮುಂದಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಎರಡು ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಯಾವುದೇ ಸಾಲ ಎತ್ತುವಳಿ ಮಾಡಿಲ್ಲ. ಎರಡನೇ ತ್ರೈಮಾಸಿಕದಲ್ಲಿ ಸಾಲ ಮಾಡುವುದಾಗಿ ಆರ್ಬಿಐಗೆ ಮಾಹಿತಿ ನೀಡಿದ್ದರೂ, ಯಾವುದೇ ಸಾಲದ ಎತ್ತುವಳಿ ಮಾಡಿರಲಿಲ್ಲ. ಆದರೆ, ಪ್ರಸಕ್ತ ತ್ರೈಮಾಸಿಕದಲ್ಲಿ ಆರ್ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡುವುದು ಬಹುತೇಕ ಖಚಿತವಾಗಿದೆ. ಕೊನೆಯ ತ್ರೈಮಾಸಿಕದಲ್ಲಿ ಇನ್ನಷ್ಟು ಹೆಚ್ಚಿನ ಸಾಲವನ್ನು ಬಹಿರಂಗ ಮಾರುಕಟ್ಟೆಯಿಂದ ಎತ್ತುವಳಿ ಮಾಡಲಿದೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.