ಬೆಂಗಳೂರು : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ 8 ತಿಂಗಳ ಒಳಗೆ ತನ್ನ ಎಲ್ಲ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಶಿವಮೊಗ್ಗದಲ್ಲಿ ಇಂದು ತನ್ನ ಐದನೇ ಹಾಗೂ ಕೊನೆಯ ಗ್ಯಾರಂಟಿ ಯುವ ನಿಧಿಗೂ ಚಾಲನೆ ನೀಡುವ ಮೂಲಕ ಪಂಚ ಗ್ಯಾರಂಟಿಗಳೂ ಅನುಷ್ಠಾನವಾದಂತಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಸ್ಥಿತಿಗತಿ ಏನಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಅನುಷ್ಠಾನವೇ ಮೊದಲ ಆದ್ಯತೆಯಾಗಿತ್ತು. ಪಂಚ ಗ್ಯಾರಂಟಿಗಾಗಿ ಬೃಹತ್ ಹೊರೆ ಮಧ್ಯೆ ಬರದ ಬರೆಯ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೂ ಗ್ಯಾರಂಟಿ ಯೋಜನೆ ಹಳಿ ತಪ್ಪದಂತೆ ಕಸರತ್ತು ನಡೆಸುತ್ತಿರುವ ಸಿದ್ದರಾಮಯ್ಯ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ.
ನಾಲ್ಕು ಗ್ಯಾರಂಟಿಗಳಿಗೆ ಬಿಡುಗಡೆಯಾದ ಅನುದಾನ :ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ, ಯುವನಿಧಿಗೆ ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿದೆ. 2023-24 ಸಾಲಿನಲ್ಲಿ ಬಜೆಟ್ನಲ್ಲಿ ಸರ್ಕಾರ ಒಟ್ಟು ಹಂಚಿಕೆ ಮಾಡಿದ ಮೊತ್ತ 39,815 ಕೋಟಿ ರೂ. ಆಗಿದೆ. ಕೆಡಿಪಿ ಪ್ರಗತಿ ಅಂಕಿ - ಅಂಶದ ಪ್ರಕಾರ ಡಿಸೆಂಬರ್ ವರೆಗೆ ನಾಲ್ಕು ಗ್ಯಾರಂಟಿಗಳಿಗೆ ಒಟ್ಟು 18,252 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಒಟ್ಟು ನಾಲ್ಕು ಗ್ಯಾರಂಟಿಗಳಿಗೆ ಸುಮಾರು 16,535 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗಿದೆ.
ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಎಷ್ಟು? :ಶಕ್ತಿ ಯೋಜನೆಗೆ ಸರ್ಕಾರ 2023-24 ಸಾಲಿನಲ್ಲಿ ಒಟ್ಟು 2,800 ಅನುದಾನ ಹಂಚಿಕೆ ಮಾಡಿದೆ. ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಆರಂಭವಾಗಿದೆ. ಡಿಸೆಂಬರ್ ವರೆಗೆ ಶಕ್ತಿ ಯೋಜನೆಯಡಿ ಸುಮಾರು 130 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಟಿಕೆಟ್ ವೆಚ್ಚ ಸುಮಾರು 3,000 ಕೋಟಿ ರೂ. ತಲುಪಿದೆ. ಕೆಡಿಪಿ ಪ್ರಗತಿ ಅಂಕಿ - ಅಂಶದ ಪ್ರಕಾರ ಡಿಸೆಂಬರ್ ವರೆಗೆ ಶಕ್ತಿ ಯೋಜನೆಗಾಗಿ 1,669.72 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಡಿಸೆಂಬರ್ ವರೆಗೆ ಒಟ್ಟು 1,669.45 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ.
ಅನ್ನಭಾಗ್ಯಕ್ಕೆ ಹಣ ಬಿಡುಗಡೆ ಏನು? :ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊರತೆ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಕೆ.ಜಿ. ಅಕ್ಕಿ ಬದಲು ನಗದು ನೀಡುವ ವ್ಯವಸ್ಥೆಯನ್ನು ಮುಂದುವರಿಸಿದೆ. ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಅಕ್ಕಿ ಕೊರತೆ ಎದುರಾದ ಕಾರಣ ಸರ್ಕಾರ ಜುಲೈ 10 ರಿಂದ ಫಲಾನುಭವಿಗಳ ಖಾತೆಗೆ ಅಕ್ಕಿ ಬದಲು ನಗದು ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪ್ರತಿ ಕೆ.ಜಿಗೆ ರೂ.34 ರೂ.ನಂತೆ ಮಾಸಿಕ 170 ರೂ. ನಗದನ್ನು ಪಡಿತರ ಫಲಾನುಭವಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾಯಿಸಲಾಗುತ್ತಿದೆ.