ಬೆಂಗಳೂರು:ಜಿದ್ದಾಜಿದ್ದಿನ ರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿರುವ ಕಾಂಗ್ರೆಸ್ ಅಭೂತಪೂರ್ವ ವಿಜಯದೊಂದಿಗೆ ರಾಜ್ಯದ ಗದ್ದುಗೆ ಹಿಡಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿಗಳು ಸೇರಿ ಹಲವರು ಹೀನಾಯ ಸೋಲು ಕಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 12 ಸಚಿವರು ಸೇರಿ ಘಟಾನುಘಟಿಗಳು ಮಂಡಿಯೂರಿದ್ದಾರೆ. ಇತ್ತ ಅದೆಷ್ಟೂ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ. ಹಲವು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ . ಕನಕಪುರದಲ್ಲಿ ಆಗ ಸಚಿವರಾಗಿದ್ದ ಆರ್ ಅಶೋಕ್ ಸಹ ಬಿಜೆಪಿಯಿಂದ ಠೇವಣಿ ಕಳೆದುಕೊಂಡಿದ್ದಾರೆ.
ಠೇವಣಿ ಮುಟ್ಟುಗೋಲು ಎಂದರೇನು?:ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ ಭದ್ರತಾ ಠೇವಣಿ ಮೊತ್ತವನ್ನು ನಾಮಪತ್ರ ಸಲ್ಲಿಕೆ ವೇಳೆ ಕ್ಷೇತ್ರದ ಚುನಾವಣಾಧಿಕಾರಿಗೆ ಪಾವತಿಸಬೇಕು. ಪ್ರತಿ ಅಭ್ಯರ್ಥಿ 10 ಸಾವಿರ ರೂ. ಭದ್ರತಾ ಠೇವಣಿ ಇಡಬೇಕು. ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು 5,000 ರೂ. ಠೇವಣಿ ಪಾವತಿಸಬೇಕು. ಅಭ್ಯರ್ಥಿ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6 ಗಿಂತ ಹೆಚ್ಚಿಗೆ ಮತ ಗಳಿಸಬೇಕು.
ಅಷ್ಟು ಮತಗಳಿಸಿದರೆ ಚುನಾವಣಾಧಿಕಾರಿಗೆ ಪಾವತಿಸಿದ ಠೇವಣಿ ಹಣ ಅಭ್ಯರ್ಥಿಗೆ ಮರಳಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿ 1/6 ಗಿಂತ ಕಡಿಮೆ ಮತಗಳಿಸಿದರೆ ಆತನ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ. ಅಂದರೆ ಠೇವಣಿ ಮೊತ್ತವನ್ನು ಅಭ್ಯರ್ಥಿಗಳಿಗೆ ಮರುಪಾವತಿಸುವುದಿಲ್ಲ. ಅಭ್ಯರ್ಥಿಯೊಬ್ಬನ ಚುನಾವಣಾ ಠೇವಣಿ ಮುಟ್ಟುಗೋಲಾದರೆ ಆತನನ್ನು ಕ್ಷೇತ್ರದ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅರ್ಥ.
ಈ ಬಾರಿ ಮುಟ್ಟುಗೋಲಾದ ಠೇವಣಿ ಎಷ್ಟು?:ಈ ಬಾರಿ ಚುನಾವಣೆ ಹಲವು ಅಚ್ಚರಿ, ಆಘಾತಗಳನ್ನು ನೀಡಿದೆ. ಚುನಾವಣಾ ಅಖಾಡದಲ್ಲಿ ಈ ಬಾರಿ ಸುಮಾರು 2,613 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಆ ಪೈಕಿ ಬಿಜೆಪಿ 224 ಅಭ್ಯರ್ಥಿಗಳನ್ನು, ಕಾಂಗ್ರೆಸ್ 223 ಹಾಗೂ ಜೆಡಿಎಸ್ 207 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 918 ಪಕ್ಷೇತರರು ಹಾಗೂ ನೋಂದಾಯಿತ ಪಕ್ಷಗಳಿಂದ 685 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಸುಮಾರು 2,389 ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದರಲ್ಲಿ ಸುಮಾರು 2,120 ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ.
ಜೆಡಿಎಸ್ನಲ್ಲಿ ಒಟ್ಟು 207 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅದರಲ್ಲಿ 19 ಮಂದಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಗಿದೆ. ಇನ್ನು 136 ಜೆಡಿಎಸ್ ಅಭ್ಯರ್ಥಿಗಳು ಹೀನಾಯ ಸೋಲು ಕಂಡು ಠೇವಣಿ ಕಳೆದುಕೊಂಡಿದ್ದಾರೆ. ಕಡೂರಿನಲ್ಲಿ ಸ್ಪರ್ಧಿಸಿದ್ದ ವೈ.ಎಸ್.ವಿ.ದತ್ತಾ ಕೇವಲ 26,837 ಮತ ಗಳಿಸಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೀನಾಯ ಸೋಲು ಕಂಡು ಠೇವಣಿ ಕಳೆದುಕೊಂಡಿದ್ದಾರೆ.