ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಬದಲು ರಾಜ್ಯದ ಯಾವುದಾದರೂ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡುವಂತೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯಲಹಂಕ ಮೇಲ್ಸೆತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಹೆಸರಿಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರ ಅಲ್ಲ ಎನ್ನುವುದಕ್ಕೆ ಯಲಹಂಕ ಮೇಲ್ಸೆತುವೆಗೆ ಸಾವರ್ಕರ್ ಹೆಸರಿಡುವ ಅವಸರದ ನಿರ್ಧಾರವೇ ಪುರಾವೆ. ಯಡಿಯೂರಪ್ಪ ಅವರೇ, ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿರುವುದು ಇಂತಹ ಜನ ವಿರೋಧಿ ನಿರ್ಧಾರಗಳಿಗಾಗಿಯೇ ಎಂದು ಪ್ರಶ್ನಿಸಿದ್ದಾರೆ.
ನೆಹರು ಸ್ಮರಣೆ:ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯತಿಥಿ ಸಂದರ್ಭದಲ್ಲಿ ಟ್ವೀಟ್ ಮೂಲಕ ನೆನೆದಿರುವ ಸಿದ್ದರಾಮಯ್ಯ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗಳೆಂಬ ಎರಡು ಹಳಿಗಳ ಮೇಲೆ ಆಧುನಿಕ ಭಾರತದ ಅಭಿವೃದ್ಧಿಯ ಬಂಡಿಗೆ ಚಾಲನೆ ನೀಡಿ ಗುರಿ ಕಡೆಗೆ ಮುನ್ನಡೆಸಿದ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು. ಆ ಹಿರಿಯ ಚೇತನಕ್ಕೆ ಗೌರವ ಪೂರ್ವಕ ನಮನ ಸಲ್ಲಿಸುವ ಮೂಲಕ ಪುಣ್ಯಸ್ಮರಣೆ ಮಾಡೋಣ ಎಂದಿದ್ದಾರೆ.