ಬೆಂಗಳೂರು: ಮೈಸೂರಿನ ಅರಸರಾಗಿ ಕರ್ನಾಟಕವನ್ನು ಪ್ರಗತಿ ಪಥದ ಮೇಲೆ ಪ್ರತಿಷ್ಠಾಪಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಏಳು ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು ಒಳಗೊಂಡಿರುವ ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ಕ್ಯಾಂಪಸ್‌ಗೆ ಅವರ ಹೆಸರನ್ನೇ ಇಡಲಾಗುವುದು. ಜತೆಗೆ ತಾಂತ್ರಿಕ ಶಿಕ್ಷಣ ಆಯುಕ್ತಾಲಯವನ್ನು ಅವರ ಧ್ಯೇಯಾದರ್ಶ ಮತ್ತು ದೂರದೃಷ್ಟಿಗಳನ್ನು ಪ್ರತಿಬಿಂಬಿಸುವಂತೆ ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿಪ್ಲೊಮಾ ಪದವೀಧರರ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಈ ಘಟಿಕೋತ್ಸವಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡಲಾಗಿದೆ. ಈಗ ನಾಲ್ವಡಿಯವರ ಹೆಸರು ಪಡೆಯಲಿರುವ ಕ್ಯಾಂಪಸ್ನಲ್ಲಿ ಎಸ್ ಜೆ ಪಾಲಿಟೆಕ್ನಿಕ್, ಮಹಿಳೆಯರ ಸರ್ಕಾರಿ ಪಾಲಿಟೆಕ್ನಿಕ್, ಜಿಆರ್ಐಸಿ ಪಾಲಿಟೆಕ್ನಿಕ್, ಎಸ್.ಆರ್.ಸಿ.ಐ.ಬಿ.ಎಂ, ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ, ಸರ್ಕಾರಿ ಜವಳಿ ತಂತ್ರಜ್ಞಾನ ಸಂಸ್ಥೆ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಇವೆಲ್ಲವೂ ನಾಡಿಗೆ ನಾಲ್ವಡಿಯವರ ಕೊಡುಗೆಗಳಾಗಿವೆ ಎಂದು ಸ್ಮರಿಸಿದರು.
ಡಿಪ್ಲೊಮಾ ಶಿಕ್ಷಣದಲ್ಲಿ ಒಟ್ಟು 45 ಕೋರ್ಸುಗಳಿವೆ. ಇವುಗಳ ಜತೆಗೆ ಹೋದ ವರ್ಷದಿಂದ ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್, ಟ್ರಾವೆಲ್ ಆ್ಯಂಡ್ ಟೂರಿಸಂ, ಬಿಗ್ ಡೇಟಾ ತರಹದ ಆಧುನಿಕ ಕೋರ್ಸುಗಳನ್ನೂ ಆರಂಭಿಸಲಾಗಿದೆ. ಇದರ ಜತೆಗೆ ಏಕಕಾಲದಲ್ಲಿ ಎರಡು ವಿಷಯಗಳಲ್ಲಿ ಪದವಿ ಪಡೆಯುವ ಟ್ವಿನ್ನಿಂಗ್ ಕೋರ್ಸುಗಳನ್ನು ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್‌ನಲ್ಲಿ ಆರಂಭಿಸಲಾಗಿದ್ದು, 48 ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಚಿನ್ನದ ಪದಕ ಪಡೆದ '70ರ ವಿದ್ಯಾರ್ಥಿ': 2022ರ ಡಿಪ್ಲೊಮಾ ಶಿಕ್ಷಣದ ಹಲವು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರದಾನ ಮಾಡಿದರು. ಸಿವಿಲ್ ಡಿಪ್ಲೊಮಾದಲ್ಲಿ ಶಿರಸಿಯ 70ರ ಹಿರಿಯರಾದ ನಾರಾಯಣ ಭಟ್ ಶೇ.94.88ರಷ್ಟು ಅಂಕ ಗಳಿಸುವ ಮೂಲಕ ಪ್ರಥಮ ರ್‍ಯಾಂಕ್ ಪಡೆದುಕೊಂಡು, ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು ವಿಶೇಷವಾಗಿತ್ತು.