ಬೆಂಗಳೂರು:ಡಿಜೆ ಹಳ್ಳಿ ಸೇರಿದಂತೆ ಕೆಲವೆಡೆ ನಿನ್ನೆ ರಾತ್ರಿ ಹಿಂಸಾಕೃತ್ಯ ನಡೆಸಿದವರು ಯಾರೇ ಆಗಲಿ, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಅಷ್ಟೇ ಅಲ್ಲ ಇನ್ಮುಂದೆ ಈ ರೀತಿಯ ದುಷ್ಕೃತ್ಯ ನಡೆಸುವವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆ ವಿಧಿಸುವುದಕ್ಕೆ ನಮ್ಮ ಸರ್ಕಾರ ಹಿಂದು ಮುಂದು ನೋಡುವುದಿಲ್ಲ ಎಂದಿದ್ದಾರೆ. ಈ ಕೃತ್ಯಗಳನ್ನು ಖಂಡಿಸುವ ಬದಲು ಕಾಂಗ್ರೆಸ್ ಮುಖಂಡರು ಪೊಲೀಸರ ವೈಫಲ್ಯವೇ ಈ ಘಟನೆಗೆ ಕಾರಣ ಮತ್ತು ಇದಕ್ಕೆ ಪ್ರಚೋದನೆ ನೀಡಿದ ವ್ಯಕ್ತಿ ಬಿಜೆಪಿ ಬೆಂಬಲಿಗ ಎಂದು ಹೇಳಿರುವುದು ಅವರ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದ್ದಾರೆ.
ತಮ್ಮವರೇ ಪ್ರಚೋದನಾಕಾರಿ ಹೇಳಿಕೆ ನೀಡಿದ ಪರಿಣಾಮವಾಗಿ ಇಂಥ ಹಿಂಸಾಕೃತ್ಯಗಳು ನಡೆದರೂ ಇದು ಬಿಜೆಪಿ ಬೆಂಬಲಿಗರ ಕೃತ್ಯ ಎಂದು ಆರೋಪಿಸಿ ಜನರನ್ನು ದಾರಿತಪ್ಪಿಸಲು ಹವಣಿಸುವುದು ಕಾಂಗ್ರೆಸ್ನವರ ಹಳೆಯ ಚಾಳಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಇಂಥ ಸವಾಲಿನ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡುತ್ತಿರುವುದು ಅವರ ಹತಾಶೆಗೆ ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ.
ಇಂತಹ ಗಲಭೆಯನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸುವ ಬದಲು ಪರೋಕ್ಷವಾಗಿ ಇಂತಹ ಪುಂಡರ ಸಮರ್ಥನೆಗೆ ಇಳಿದು ಪ್ರಚೋದನೆ ನೀಡುತ್ತಾ, ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿರುವುದು ವಿಷಾದನೀಯ ಎಂದು ಸವದಿ ಹೇಳಿದ್ದಾರೆ.