ಬೆಂಗಳೂರು: ಸಿಎಂ ಬಿಎಸ್ವೈ ಮೊದಲು ಈ ಅಲೆಯಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೂರನೇ ಅಲೆ ಎದುರಿಸಲು ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದಾರೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಿ, ನಮ್ಮದೇನು ತಕರಾರು ಇಲ್ಲ. ಎರಡನೇ ಅಲೆಯಲ್ಲಿ ಜನ ಸಾಯುವುದನ್ನು ತಪ್ಪಿಸಲು ಕಾರ್ಯಕ್ರಮ ರೂಪಿಸಬೇಕು.
ವ್ಯಾಕ್ಸಿನ್ ನೀಡುತ್ತೇನೆ ಎಂದು ಹೇಳಿದರು ಹಾಗೂ ಬೌರಿಂಗ್ ಆಸ್ಪತ್ರೆಗೆ ತೆರಳಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ, ನಾನು ಮಕ್ಕಳಿಗೋಸ್ಕರ ನನ್ನ ಮನೆಯಲ್ಲೇ ಕುಳಿತು ನೋಂದಣಿ ಮಾಡಲು ಪ್ರಯತ್ನಿಸಿದೆ.
ಆದರೆ, ಅದು ಸಾಧ್ಯವಾಗಲಿಲ್ಲ. ಯಾರಿಂದಲೂ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದೆ. ಆದರೆ, ಸರ್ಕಾರಕ್ಕೆ ಯಾವುದೇ ನಿಖರತೆ ಇಲ್ಲವಾಗಿದೆ ಎಂದು ತಿಳಿಸಿದರು.
ಸಿಇಟಿ ಬೋರ್ಡ್ ಮಾದರಿಯಲ್ಲಿ ಯಾವ ಕಾಲೇಜಿನಲ್ಲಿ ಸೀಟು ಇದೆ ಎಂದು ಮಾಹಿತಿ ನೀಡಲಾಗುತ್ತದೆಯೋ ಅದೇ ರೀತಿ ಆನ್ ಲೈನ್ ಮೂಲಕವೇ ಎಲ್ಲ ಮಾಹಿತಿ ದೊರಕಿಸುವ ರೀತಿಯ ವ್ಯವಸ್ಥೆ ಮಾಡಿ. ಅರ್ಧ ಡಜನ್ ಸಚಿವರನ್ನು ಇದೇ ಕಾರ್ಯಕ್ಕೆ ನಿಯೋಜಿಸಿದ್ದು, ಅವರನ್ನು ಸದ್ಬಳಕೆ ಮಾಡಿಕೊಳ್ಳಿ.
ಆಮ್ಲಜನಕ ಲಭ್ಯತೆ ಎಷ್ಟಿದೆ, ಎಲ್ಲಿಂದ ತರಿಸಲಾಗಿದೆ, ಪರಿಸ್ಥಿತಿ ಯಾವ ರೀತಿ ಇದೆ ವ್ಯಾಕ್ಸಿನೇಷನ್ ಎಲ್ಲಿ ನೀಡಲಾಗುತ್ತದೆ ಎಂಬುದು ಸೇರಿದಂತೆ ಎಲ್ಲ ಮಾಹಿತಿಯನ್ನು ಆನ್ಲೈನ್ ಮೂಲಕವೇ ಒದಗಿಸುವ ಕಾರ್ಯ ಆಗಬೇಕು. ಶಿವಮೊಗ್ಗದಲ್ಲಿ ಒಬ್ಬ ಸಚಿವರು ಹೇಳಿದ್ದಾರೆ ನಮ್ಮ ಬಳಿ ನೋಟನ್ನು ಮುದ್ರಿಸುವ ಯಂತ್ರ ಇಲ್ಲ ಅಂತ.
ಅದೇ ನಮ್ಮ ಸಚಿವರು ನೋಟ್ ಎಣಿಸುವ ಯಂತ್ರವನ್ನು ಇರಿಸಿಕೊಂಡಿದ್ದಾರಲ್ಲಾ! ಜನರಿಗೆ ಸೇವೆ ಸೌಲಭ್ಯವನ್ನು ನೀಡಲು ಸಾಧ್ಯವಿಲ್ಲ ಅಂದರೆ ಆಗಲ್ಲ ಎಂದು ತಿಳಿಸಿ. ಸರ್ಕಾರದ ಬಳಿ ದುಡ್ಡು ಇಲ್ಲ ಎಂದು ಹೇಳಿ. ಜನ ನೋವಿನಲ್ಲಿದ್ದಾರೆ ಲಾಕ್‌ಡೌನ್ ಸಂದರ್ಭದಲ್ಲಿ ಸಹಾಯ ಮಾಡಿ ಎಂದು ಕೇಳುತ್ತಿದ್ದಾರೆ. ಸಾಮಾನ್ಯ ದಿನದಲ್ಲಿ ಯಾರಾದರೂ ಪರಿಹಾರ ಕೇಳುತ್ತಾರಾ ಎಂದು ಪ್ರಶ್ನಿಸಿದರು.
ತಮಿಳುನಾಡು ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಪರಿಹಾರ ಕೊಡುವ ಘೋಷಣೆ ಮಾಡಿದೆ. ಪ್ರತಿ ಖಾತೆದಾರರಿಗೆ ತಲಾ 4000 ರೂ. ಹಾಕುತ್ತೇವೆ ಎಂದಿದ್ದಾರೆ. ನಮ್ಮ ರಾಜ್ಯದ ಜನ ಕೇಳುತ್ತಿದ್ದಾರೆ. ಹಾರ್ದಿಕ ಸಮಸ್ಯೆ ಎದುರಾಗಲಿದೆ ಎಂಬ ಆತಂಕಕ್ಕೆ ಜನ ನಗರ ತೊರೆದು ತಮ್ಮ ತವರು ಸೇರುತ್ತಿದ್ದಾರೆ.