ಬೆಂಗಳೂರು :ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಆದರೆ, ಯಾರ ಜತೆ ಚರ್ಚೆ ಮಾಡಬೇಕು ಎಂದು ತೀರ್ಮಾನಿಸುತ್ತೇನೆ. ಬಿಜೆಪಿಯ ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಹೋರಾಟ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಭ್ರಷ್ಟಾಚಾರದ ಚರ್ಚೆಯಿಂದ ವಾಪಸ್ ಹೋಗುವುದಿಲ್ಲ. ಈ ಚರ್ಚೆಯನ್ನು ಅಧ್ಯಕ್ಷರ ಜತೆ ಮಾಡಬೇಕೋ, ಮಾಜಿ ಮುಖ್ಯಮಂತ್ರಿಗಳ ಜತೆ ಮಾಡಬೇಕೋ ಎಂದು ತೀರ್ಮಾನ ಮಾಡುತ್ತೇನೆ.
ರಾಜ್ಯ ಸರ್ಕಾರ ಈಶ್ವರಪ್ಪ ಅವರ ಪ್ರಕರಣ ಮುಚ್ಚಿ ಹಾಕಿದ್ದು, ಈ ವಿಚಾರವಾಗಿ ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹಸಚಿವರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ನೀವೇ ನೋಡಿ. ಬಿ ರಿಪೋರ್ಟ್ ಸಲ್ಲಿಕೆ ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವೇ ಪ್ರಾರಂಭದಿಂದ ಪ್ರಯತ್ನ ಪಟ್ಟಿದ್ದನ್ನು ಸಾಬೀತುಪಡಿಸಿದೆ ಎಂದರು.
ಹೀಗಾಗಿ ಪ್ರತಿಪಕ್ಷದ ನಾಯಕರು ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ತಾಂಡವಕ್ಕೆ ಯುವಕ ಬಲಿಯಾಗಿದ್ದು, ಇದೇ ರೀತಿ ಬೇರೆ ಇಲಾಖೆಗಳಿಂದಲೂ ಹಲವು ದೂರುಗಳು ಬಂದಿವೆ. ಸರ್ಕಾರ ಆರಂಭದಲ್ಲೇ ಕ್ಲೀನ್ ಚಿಟ್ ನೀಡಿದರೆ ಪೊಲೀಸ್ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ?.