ಬೆಂಗಳೂರು : ಸದ್ಯ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ತಕ್ಕಮಟ್ಟಿಗೆ ಹತೋಟಿಗೆ ಬಂದಿವೆ.
ಜನರು ಮನೆಯೊಳಗೇ ಹೆಚ್ಚಾಗಿ ಇದ್ದು, ಹೊರಗೆ ಓಡಾಡದ ಕಾರಣ ಕೋವಿಡ್ ಹರಡುವ ಪ್ರಮಾಣ ಕಡಿಮೆ ಆಗಿ, 26 ಸಾವಿರ ಪ್ರಕರಣದಿಂದ 4 ಸಾವಿರ ಪ್ರಕರಣಕ್ಕೆ ಇಳಿಕೆಯಾಗಿದೆ. ಆದರೆ, ಜೂನ್ 7ಕ್ಕೆ ಲಾಕ್‌ಡೌನ್ ಅವಧಿ ಮುಗಿಯಲಿದೆ.
ಏಕಾಏಕಿ ಜನ ಓಡಾಟಕ್ಕೆ ಶುರುಮಾಡಿದರೆ ಮತ್ತೆ ಕೋವಿಡ್ ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹಂತ ಹಂತವಾಗಿಯೇ ಬೆಂಗಳೂರು ಅನ್‌ಲಾಕ್ ಮಾಡಲು ತಜ್ಞರು, ಅಧಿಕಾರಿಗಳು ಅಭಿಪ್ರಾಯವನ್ನು ಸರ್ಕಾರಕ್ಕೆ ಮುಟ್ಟಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ಈ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಲಾಕ್‌ಡೌನ್ ಸಡಿಲಿಕೆ ಮಾಡುವುದಿದ್ದರೆ ಹಂತ ಹಂತವಾಗಿ ಮಾತ್ರ ಮಾಡುವಂತೆ ಮನವಿ ಮಾಡಲಾಗಿದೆ. ಕೋವಿಡ್ ಪ್ರಮಾಣ ನಿಯಂತ್ರಣಕ್ಕೆ ಬರಬೇಕಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಐಸೋಲೇಷನ್, ಮೈಕ್ರೋ ಕಂಟೈನ್ ಮೆಂಟ್ ಮಾಡುವ ಬಗ್ಗೆ ಗಮನ ಕೊಡಬೇಕಿದೆ.
ಜನರು ಸಾಮಾನ್ಯ ಜೀವನಕ್ಕೆ ಹೋಗುವುದು ಮುಖ್ಯವಾಗಿದೆ. ಆದರೆ. ಒಂದೇ ಬಾರಿಗೆ ಅನ್ಲಾ್ಕ್‌ಸಾಧ್ಯವಿಲ್ಲ, ಸ್ವಲ್ಪ ಸ್ವಲ್ಪವಾಗಿಯೇ ತೆರವು ಮಾಡಲಾಗುವುದು. ಅಥವಾ ಎಲ್ಲಾ ವಲಯಗಳಲ್ಲಿ ಕಡಿಮೆ ಜನ ಇಟ್ಟು ಕೆಲಸ ಮಾಡಲು ಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರವೇ ತೀರ್ಮಾನಿಸಲಿದೆ ಎಂದರು.
ಇನ್ನು, ಲಸಿಕೆ ವಿತರಣೆ ಬಗ್ಗೆ ಮಾತನಾಡಿ, 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಆಯ್ದ ಗುಂಪುಗಳಿಗೆ 45 ಒಳಪಟ್ಟವರಿಗೂ ಲಸಿಕೆ ಕೊಡಲಾಗ್ತಿದೆ. 198 ವಾರ್ಡ್‌ಗಳಲ್ಲೂ ವ್ಯಾಕ್ಸಿನೇಷನ್ ಕ್ಯಾಂಪ್ ಆಗುತ್ತಿವೆ. ಲಸಿಕೆ ಲಭ್ಯತೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ.
ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕಾದವರ ಸಂಖ್ಯೆಯೂ ಕಡಿಮೆ ಇರುವ ಹಿನ್ನಲೆ, ಕೆಲವು ಸೆಂಟರ್‌ಗಳಲ್ಲಿ ಮಾತ್ರ ಈ ಲಸಿಕೆ ನೀಡಲಾಗ್ತಿದೆ. ಕೋವ್ಯಾಕ್ಸಿನ್ ಲಸಿಕೆ ನೀಡಲು ಪ್ರತ್ಯೇಕ ಸೆಂಟರ್, ಪ್ರತ್ಯೇಕ ತಂಡಗಳ ಆಯೋಜನೆ ಆಗಿದೆ ಎಂದರು.