ಬೆಂಗಳೂರು: ಕೋವಿಡ್ ಸಂಕಷ್ಟ ನಿವಾರಣೆಗೆ ನಾನು ಹಾಗೂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ರಾಜಾಜಿನಗರದ ಮಂಜುನಾಥ ನಗರದಲ್ಲಿ ಆಹಾರ ಕಿಟ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಪೀಡಿತರಿಗೆ ಸಾಂತ್ವನ ಹೇಳಿ, ಅವರಿಗೆ ಪರಿಹಾರ ಸಿಗುವಂತೆ ಮಾಡಲು ಕಾಂಗ್ರೆಸ್ ಒಂದು ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಮ್ಮ ಕಾರ್ಯಕರ್ತರು ನಿಮ್ಮ ಮನೆ ಬಾಗಿಲಿಗೆ ಬಂದಾಗ, ಕೋವಿಡ್‌ನಿಂದ ನಿಮಗಾಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ನಿಮ್ಮ ಪರ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಈ ಭಾಗದಲ್ಲಿ ನಮ್ಮ ನಾಯಕರು ನೂರಾರು ದಿನಗಳಿಂದ ಬಡವರಿಗೆ ಆಹಾರ ಕಿಟ್‌ಗಳನ್ನು ನೀಡುತ್ತಿದ್ದಾರೆ.
ಕನಿಷ್ಟ ಸಾವಿರ ರೂಪಾಯಿ ಮೌಲ್ಯದ ಫುಡ್ ಕಿಟ್ ನೀಡುತ್ತಿದ್ದಾರೆ. ಕೃಷ್ಣಮೂರ್ತಿ ಅವರು ಶ್ರೀಮಂತರಲ್ಲ. ಅವರಿಗೆ ಅಧಿಕಾರವೂ ಇಲ್ಲ. ಅವರನ್ನು ನೀವು ಕಾರ್ಪೊರೇಷನ್ ಗೆ ಕಳುಹಿಸಿದ್ದೀರಿ ಎಂಬ ಕಾರಣಕ್ಕೆ ಅವರು ತಮ್ಮ ಕೈಲಾದ ಸಹಾಯವನ್ನು ನಿಮಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕರೆಗೆ ಗೌರವ ಕೊಟ್ಟು ಈ ಕೆಲಸ ಮಾಡುತ್ತಿದ್ದು, ಪಕ್ಷದ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಇಲ್ಲಿರುವವರೆಲ್ಲ ಕಾರ್ಮಿಕರು. ಕಳೆದ ವರ್ಷ ನಿಮಗೆ ₹10 ಸಾವಿರ ಕೊಡಿಸಲು ನಾನು ಹಾಗೂ ಸಿದ್ದರಾಮಯ್ಯನವರು ಹೋರಾಟ ಮಾಡಿದೆವು. ಸರ್ಕಾರ ₹5 ಸಾವಿರ ನೀಡುವುದಾಗಿ ಹೇಳಿತ್ತು. ಆದರೆ, ಆ ಹಣ ನಿಮಗೆ ಬಂತಾ.? ಈ ವರ್ಷ ಘೋಷಿಸಿದ 2-3 ಸಾವಿರ ಪರಿಹಾರ ಬಂತಾ.? ಯಾರಿಗೂ ಬಂದಿಲ್ಲ. ನಮ್ಮ ಹೋರಾಟಕ್ಕೆ ಹೆದರಿ ಸರ್ಕಾರ ಕಳೆದ ವರ್ಷ 1900 ಕೋಟಿ, ಈ ವರ್ಷ ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿತು. ಚಾಲಕರಿಗೆ ₹5 ಸಾವಿರ ನೀಡುತ್ತೇವೆ ಎಂದರು, ಅವರಿಗೂ ಹಣ ಬರಲಿಲ್ಲ. ಇದು ನುಡಿದಂತೆ ನಡೆಯದ ಸರ್ಕಾರ. ಅದಕ್ಕಾಗಿಯೇ ಇಂದು ಇಲ್ಲಿನ 5 ಸಾವಿರ ಜನಕ್ಕೆ ಫುಡ್ ಕಿಟ್ ನೀಡಲು ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಹೇಳಿದರು.