ಬೆಂಗಳೂರು: ಕೊರೊನಾದಂತಹ ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಷಯ ಅಪ್ರಸ್ತುತವಾಗಿದ್ದು, ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೇವೆ. ರಾಜ್ಯದ ಕೊರೊನಾ ನಿರ್ವಹಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ. ಇಲ್ಲಿರುವ ಸ್ಥಿತಿಗತಿ, ಹೆಚ್ಚಾಗಿರುವ ಕೇಸ್ಗಳ ಬಗ್ಗೆ ಅಮಿತ್ ಶಾ ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.
ನಾವು ನಮಗೆ ಬೇಕಾಗಿರುವ ಆಮ್ಲಜನಕದ ಬೇಡಿಕೆಯ ಬಗ್ಗೆ ಎಲ್ಲ ವಿವರವನ್ನು ಕೊಟ್ಟಿದ್ದೇವೆ. ಸದ್ಯ 965 ಮೆಟ್ರಿಕ್ ಟನ್ ನಮಗೆ ಅಲಾಟ್ ಆಗಿದ್ದು, ನಮ್ಮ ರಾಜ್ಯದಲ್ಲಿಯೇ ಉತ್ಪಾದನೆ ಆಗುವ ಆಮ್ಲಜನಕವನ್ನು ಕೊಡಬೇಕು. ದೂರದ ರಾಜ್ಯಗಳಿಂದ ತರುವುದು ಕಷ್ಟವಾಗಲಿದೆ ಎಂದಿದ್ದೇವೆ, ಜೊತೆಗೆ ನಮ್ಮ ರಾಜ್ಯದ ಆಮ್ಲಜನಕದ ಕೋಟಾವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದೇವೆ. ಇದರೊಂದಗೆ ನೀವು ಆಮ್ಲಜನಕ ಕೊಟ್ಟರೂ ಕೂಡ ಟ್ಯಾಂಕರ್ಗಳ ಕೊರತೆಯಿಂದಾಗಿ ಜಿಲ್ಲೆಗಳಿಗೆ ತಲುಪಿಸಲು ಕಷ್ಟವಾಗುತ್ತಿದೆ ಎಂದಿದ್ದೇವೆ. ಇದೆಲ್ಲವನ್ನೂ ಸಕಾರಾತ್ಮಕ ರೀತಿಯಲ್ಲಿ ಪರಿಗಣಿಸಿದ್ದಾರೆ ಎಂದರು.
ಇಂದು ಸುಪ್ರೀಂ ಕೋರ್ಟ್ನ ಸಭೆ ಇದೆ. ಅದಾದ ನಂತರ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಆಮ್ಲಜನಕ ಹೆಚ್ಚು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ನಾಲ್ಕು ಟ್ಯಾಂಕರ್ಗಳನ್ನು ನಿನ್ನೆ ಸ್ಯಾಂಕ್ಷನ್ ಮಾಡಿದ್ದಾರೆ. ಇನ್ನು10 ಟ್ಯಾಂಕರ್ಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಸ್ವಲ್ಪ ಸಮಯ ಹಿಡಿಯಲಿದೆ ಎಂದಿದ್ದಾರೆ ಮತ್ತು ಈಗಾಗಲೇ ಬಂದಿರುವ ಎರಡು ಟ್ಯಾಂಕರ್ ಉಪಯೋಗಿಸಿಕೊಳ್ಳುವಂತೆ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸಂಪೂರ್ಣವಾದ ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.