ಕರ್ನಾಟಕ

karnataka

ETV Bharat / state

ಒಂದು ಕಡೆ ಕೊಟ್ಟು ಇನ್ನೊಂದೆಡೆ ಕಿತ್ಕೊಳ್ಳೋ ಕೆಲಸ ನಾವು ಮಾಡುತ್ತಿಲ್ಲ: ನಿರ್ಮಲಾ ಸೀತಾರಾಮನ್‌ - ಸಚಿವೆ ನಿರ್ಮಲಾ ಸೀತಾರಾಮನ್

ಲಾಕ್‌ ಡೌನ್ ವೇಳೆ ಬಡ ವರ್ಗಕ್ಕೆ ಸಾಕಷ್ಟು ರೀತಿಯಲ್ಲಿ ಕೇಂದ್ರ ಆರ್ಥಿಕ ನೆರವು ನೀಡಿದೆ. ಅಡುಗೆ ಎಣ್ಣೆ ದರ ಏರಿಕೆಗೆ ಕಾರಣ ಇದೆ. ಕಚ್ಚಾ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪೆಟ್ರೋಲ್, ಡೀಸೆಲ್ ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಹೆಚ್ಚಾಗಿರೋದು ಕಾರಣ ಎಂದು ಬೆಲೆ ಏರಿಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಸಮರ್ಥನೆ ನೀಡಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

By

Published : Jul 2, 2021, 7:01 PM IST

Updated : Jul 2, 2021, 9:53 PM IST

ಬೆಂಗಳೂರು:ಕೇಂದ್ರ ಸರ್ಕಾರ ಆರ್ಥಿಕ ನೆರವು ಘೋಷಣೆ ಮಾಡಿ ಇಂಧನ ಬೆಲೆ ಹೆಚ್ಚಿಸಿ ಹಣ ವಾಪಸ್ ಪಡೆಯುತ್ತಿರುವ ಆರೋಪ ಸುಳ್ಳು. ಅಗತ್ಯ ವಸ್ತುಗಳ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ನಗರದ ಬಿಎಂಆರ್‌ಡಿಎನಲ್ಲಿ ಸಂಸದರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ಕೊಳ್ಳೋ ಕೆಲಸ ಮಾಡುತ್ತಿಲ್ಲ. ಲಾಕ್​ ಡೌನ್ ಸಂದರ್ಭದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಉಚಿತ LPG ಸಿಲಿಂಡರ್‌ಗಳನ್ನು ಕೊಟ್ಟಿದ್ದೇವೆ. ಲಾಕ್‌ಡೌನ್ ವೇಳೆ ಬಡ ವರ್ಗಕ್ಕೆ ಸಾಕಷ್ಟು ರೀತಿಯಲ್ಲಿ ಕೇಂದ್ರ ಆರ್ಥಿಕ ನೆರವು ನೀಡಿದೆ. ಅಡುಗೆ ಎಣ್ಣೆ ದರ ಏರಿಕೆಗೆ ಕಾರಣ ಇದೆ. ಕಚ್ಚಾ ತಾಳೆ ಎಣ್ಣೆಯನ್ನ ಆಮದು ಮಾಡಿಕೊಳ್ಳುತ್ತಿದ್ದೇವೆ. ಪೆಟ್ರೋಲ್, ಡೀಸೆಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಹೆಚ್ಚಾಗಿರೋದು ಕಾರಣ ಎಂದು ಬೆಲೆ ಏರಿಕೆ ಬಗ್ಗೆ ಸಮರ್ಥನೆ ನೀಡಿದರು.

'GST ವ್ಯಾಪ್ತಿಗೆ ತರಲು ತಕರಾರಿಲ್ಲ'

GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್‌ ಅನ್ನು ತರುವ ವಿಚಾರ ಕೇಂದ್ರದಿಂದ ಯಾವುದೇ ತಕರಾರು ಇಲ್ಲ. ರಾಜ್ಯಗಳು ಇದಕ್ಕೆ ಸಮ್ಮತಿ ನೀಡಿದರೆ ಜಿಎಸ್‌ಟಿ ಕೌನ್ಸಿಲ್ ಒಪ್ಪುತ್ತದೆ. ಮತ್ತೆ ಇಂಧನ ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಕಾನೂನು ತಿದ್ದುಪಡಿ ಬೇಡ ಎಂದರು.

ಇಂಧನ ದರ ಹೆಚ್ಚಳ ವಿಚಾರವಾಗಿ ಮಾತನಾಡಿ, ಇಂಧನ ವಸ್ತುಗಳ ಮೇಲೆ ಅಬಕಾರಿ ಶುಲ್ಕ ಬಗ್ಗೆ ಈಗಾಗಲೇ ಇಂಧನ ಸಚಿವರು ಮಾತಾಡಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ವಿಷಯ, ಕೇಂದ್ರ ಲೆವಿ ಫಿಕ್ಸ್ ಮಾಡಲಿದೆ, ರಾಜ್ಯಗಳಿಗೆ ಸುಂಕ ಹೆಚ್ಚಿಸುವ, ಇಳಿಸುವ ಅವಕಾಶ ಇದೆ ಎಂದರು.

ಇದೇನಾ ಅಚ್ಛೇ ದಿನ್?- ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯೆ

ಅಗತ್ಯ ವಸ್ತುಗಳ‌ದರ ಹೆಚ್ಚಳ ‌ಮಾಡಿದ್ದೇ ಅಚ್ಛೇ ದಿನಗಳಾ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದಿಂದ ಬರಬೇಕಾಗಿದ್ದ 5,000 ಕೋಟಿಗೆ ನಾನು ಅಡ್ಡಿ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿರುವುದು ಸರಿಯಲ್ಲ ಎಂದರು.

ಅವರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಹಣಕಾಸು ಅಕ್ರಮಗಳ ಬಗ್ಗೆಯೂ ಅವರು ಸ್ವಲ್ಪ ಮಾತನಾಡಲಿ‌, ಸಿದ್ದರಾಮಯ್ಯನವರು ತಪ್ಪು ಮಾಹಿತಿ ಕೊಡಬಾರದು ಕರ್ನಾಟಕಕ್ಕೆ ತೊಂದರೆ ಮಾಡಬೇಕೆಂದು ನಮ್ಮ ಉದ್ದೇಶವಿರಲಿಲ್ಲ ಎಂದರು.

ರಾಜ್ಯ ಸರ್ಕಾರ ಆದಾಯ ಕೊರತೆ ಪ್ರಮಾಣವನ್ನು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ತೋರಿಸಿದ್ದರಿಂದ ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸು ಬಿಡುಗಡೆ ತಡೆಹಿಡಿಯಲಾಯ್ತು. ಸಹಜ ಆದಾಯ ಕೊರತೆ ಸರಿಯಾದ ಕ್ರಮ, ಹೆಚ್ಚುವರಿ ಆದಾಯ ಕೊರತೆ ತೋರಿಸುವುದು ರಾಜ್ಯಗಳಿಗೆ ಶೋಭೆ ತರಲ್ಲ. ಹಾಗಿದ್ರೆ ಕರ್ನಾಟಕ ಹೆಚ್ಚುವರಿ ಆದಾಯ ತೋರಿಸಿ ತಪ್ಪೆಸಗಿದೆಯಾ ಎಂಬ ಪ್ರಶ್ನೆಗೆ ತಪ್ಪು ರಾಜ್ಯದಿಂದಲ್ಲದಿದ್ದರೂ ಹಣಕಾಸು ಆಯೋಗದಿಂದಲಾದ್ರೂ ಆಗಿರಬಹುದಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕರ್ನಾಟಕದ ಸಂಸದರಾಗಿ ಇಲ್ಲಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ್ತಿಲ್ಲ ಅನ್ನೋ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ವ್ಯಂಗ್ಯದ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, ನನ್ನನ್ನು ಕ್ಷಮಿಸಿ, ಹೌದು ನಾನು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ್ತಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಪ್ರಯತ್ನಿಸುತ್ತೇನೆ. ಇನ್ನು ಬಜೆಟ್‌ನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ಹೆಚ್ಚಿನ ರೂಪದಲ್ಲಿ ಗಮನ ನೀಡಿದೆ. ದೇಶದ ಅಭಿವೃದ್ಧಿ ನಮ್ಮ ಚಿತ್ತ ಎಂದರು.

ಇದನ್ನೂ ಓದಿ: ‘ಮುಂದಿನ ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ’ - ಶಾಸಕರ ಪುತ್ರಿ ಮದುವೆಯಲ್ಲಿ ಕೈ ಕಾರ್ಯಕರ್ತರ ಘೋಷಣೆ

Last Updated : Jul 2, 2021, 9:53 PM IST

ABOUT THE AUTHOR

...view details