ಬೆಂಗಳೂರು: ರಾಜ್ಯ ಮಹಿಳಾ ಆಯೋಗ ಅತ್ಯಂತ ಪಾರದರ್ಶಕವಾಗಿ ಕೆಲಸ ನಿರ್ವಹಿಸಿದೆ. ದೂರು ದಾಖಲಾದ ಕೆಲವೇ ದಿನದಲ್ಲಿ ಪರಿಹಾರ ಕಲ್ಪಿಸಿದೆ ಎಂದು ರಾಜ್ಯ ಮಹಿಳಾ ಆಯೋಗದ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದರು.
ಮಹಿಳಾ ಆಯೋಗ ಕಚೇರಿ ಹೊರ ಭಾಗದಲ್ಲಿ ತಮ್ಮ ಸೇವಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಮಹಿಳಾ ಆಯೋಗವು ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇತರ ಪ್ರಕರಣಗಳಲ್ಲಿ ಮಹಿಳೆಯರನ್ನು ರಕ್ಷಿಸಲು ಸಶಕ್ತವಾಗಿ ಕಾರ್ಯ ನಿರ್ವಹಣೆ ಮಾಡಿದೆ. ದೌರ್ಜನ್ಯ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾಖಲಾದ ದೂರುಗಳನ್ನು ಕೂಡಲೇ ಇತ್ಯರ್ಥ ಪಡಿಸುವ ಮತ್ತು ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಕೆಲವೊಂದು ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರುಗಳನ್ನು ದಾಖಲಿಸಿಕೊಂಡು ಪರಿಹಾರ ಕಲ್ಪಿಸಲಾಗಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
ಮಾರ್ಚ್ 2020 ರಿಂದ ಮಹಿಳಾ ಆಯೋಗವು ರಾಜ್ಯದಲ್ಲಿ 7,329 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 4,397 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಿವಿಧ ಹಂತಗಳಲ್ಲಿ 2,932 ಪ್ರಕರಣಗಳು ಇತ್ಯರ್ಥಕ್ಕೆ ಇನ್ನೂ ಬಾಕಿ ಇವೆ. ಒಟ್ಟು ದೂರುಗಳ ಪೈಕಿ 1,621 ಕ್ಕೂ ಹೆಚ್ಚು ಪ್ರಕರಣಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ್ದರೆ, 2,075 ಪ್ರಕರಣಗಳು ರಕ್ಷಣೆ ಕೋರಿದ್ದಾಗಿದೆ. 371 ವರದಕ್ಷಿಣೆ ಕಿರುಕುಳ, 26 ವರದಕ್ಷಿಣೆ ಸಾವು ಅಥವಾ ಕೊಲೆ, 38 ಲೈಂಗಿಕ ದೌರ್ಜನ್ಯ, 215 ಪೊಲೀಸ್ ದೌರ್ಜನ್ಯ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು.