ಬೆಂಗಳೂರು: ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಕೊಡುತ್ತಿರುವ ಸಾಲದ ಬದಲು ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘದ ಒಕ್ಕೂಟ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿ ಸಂಘಟನೆ ಕರೆಗೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀದಿ ವ್ಯಾಪಾರಿಗಳು ಸತ್ಯಾಗ್ರಹ ಕೈಗೊಂಡರು.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ವತಿಯಿಂದ ಯಶವಂತಪುರ ಮಾರುಕಟ್ಟೆ, ಮೂಡಲಪಾಳ್ಯ, ಜಯನಗರ 9ನೇ ಬ್ಲಾಕ್, ಗಾಂಧಿ ಬಜಾರ್, ಕೆಂಗೇರಿ ಮುಂತಾದ ಪ್ರದೇಶಗಳಲ್ಲಿ ವ್ಯಾಪಾರಿಗಳು ಸತ್ಯಾಗ್ರಹ ಕೈಗೊಂಡರು.
ಹಲವು ವ್ಯಾಪಾರಿಗಳು ತಮ್ಮ ಮನೆಯಲ್ಲೇ ಕೈಗೊಂಡರು ಬೀದಿ ವ್ಯಾಪಾರ ಮಾಡಲು ಅನುಮತಿ ನೀಡಿ, ಮಾನ್ಯ ಮುಖ್ಯಮಂತ್ರಿಗಳೇ ಬೀದಿ ವ್ಯಾಪಾರಿಗಳ ಕಷ್ಟ ನಿಮ್ಮ ಕಣ್ಣಿಗೆ ಏಕೆ ಕಾಣುತ್ತಿಲ್ಲ, ನಮಗೂ ಪರಿಹಾರ ನೀಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಎಸ್.ಬಾಬು ಮಾತನಾಡಿ, ನಾವು ನಮ್ಮ ಕಷ್ಟಗಳ ಬಗ್ಗೆ ಮಾನ್ಯ ಮಹಾಪೌರರು ಹಾಗೂ ಆಯುಕ್ತರನ್ನು ಭೇಟಿ ಆಗಿ ಪರಿಹಾರ ನೀಡಿ ಎಂದು ಮನವಿ ಸಲ್ಲಿಸಿದೆವು. ಆದರೇ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ . ಮುಖ್ಯಮಂತ್ರಿಗಳಿಗೆ ನಮ್ಮ ಕಷ್ಟ ಹೇಳಿಕೊಳ್ಳೋಣ ಎಂದು ಸಮಯ ಕೋರಿದರೆ ನಮಗೆ ಸಮಯಾವಕಾಶ ನೀಡಲಿಲ್ಲ. ಹೀಗಾಗಿ ಇ-ಮೇಲ್ ಮೂಲಕ ಮನವಿ ಸಲ್ಲಿಸಿದೆವು ಎಂದರು. ಅಲ್ಲದೆ ಪ್ರತಿಭಟನೆ ಮಾಡೋಣ ಎಂದರೆ 144 ಹಾಕಿದ್ದಾರೆ. ಬೇರೆ ದಾರಿ ಇಲ್ಲದೆ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೆವು ಎಂದರು.