ಬೆಂಗಳೂರು: ಪೌರ ಕಾರ್ಮಿಕರ ಆರು ಬೇಡಿಕೆಗಳನ್ನು ಹಂತ ಹಂತವಾಗಿ ರಾಜ್ಯ ಸರ್ಕಾರ ಈಡೇರಿಸುವುದಾಗಿ ಭರವಸೆ ನೀಡಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ ಶಿವಣ್ಣ ತಿಳಿಸಿದರು. ನಗರದಲ್ಲಿಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, 49 ಸಾವಿರ ಪೌರಕಾರ್ಮಿಕರ ಹುದ್ದೆಗಳ ಪೈಕಿ ಖಾಯಂ ಆಗಿ 10 ಸಾವಿರ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇದರ ಜೊತೆಗೆ ಉಳಿದವರಿಗೆ ನೇರ ಪಾವತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಾಗ, ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿತ್ತು. ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸ್ಪಂದಿಸಿದ್ದಾರೆ. ಹೀಗಾಗಿ, ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಸಮಿತಿ ರಚನೆ:ಶುಕ್ರವಾರ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ. ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸರ್ಕಾರದ ಹಿರಿಯ ಅಧಿಕಾರಿಗಳು, ಕಾನೂನು ಇಲಾಖೆ ಹಾಗೂ ಪೌರ ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಸಂಕಷ್ಟ ಭತ್ಯೆಗೆ ಅನುಮೋದನೆ:ಪೌರಕಾರ್ಮಿಕರಿಗೆ ಸಾಮಾಜಿಕವಾಗಿ ಗೌರವ, ಸೌಲಭ್ಯ ಹಾಗೂ ಸುರಕ್ಷತೆ ಅಗತ್ಯ ಎನ್ನುವುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಸರ್ಕಾರವು ಪೌರಕಾರ್ಮಿಕರ ಸಮಸ್ಯೆಗಳಿಗೆ ಮಾನವೀಯತೆಯಿಂದ ಸ್ಪಂದಿಸಲಿದೆ. ಈ ಉದ್ದೇಶದಿಂದಲೇ ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ ಮಾಸಿಕ 2000 ರೂ. ಸಂಕಷ್ಟ ಭತ್ಯೆ ಘೋಷಿಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ತಿಳಿಸಿದರು.