ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ನಿಂದ (ಆರ್‌ಬಿಐ) 2,000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಗಳಲ್ಲಿಯೂ ಈ ನೋಟುಗಳನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಗಳು ನೋಟುಗಳನ್ನು ಪಡೆಯುವುದಾಗಿ ಸ್ಪಷ್ಟಪಡಿಸಿವೆ. ಭಾನುವಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, ಕೆಎಸ್‌ಆರ್‌ಟಿಸಿ ಬಸ್ಗಳಲ್ಲಿ ನಿರ್ವಾಹಕರಿಗೆ 2,000 ರು ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶಿಸಿಲ್ಲ ಎಂದು ಹೇಳಿದೆ.
ಸಾರಿಗೆ ಬಸ್ಗಳಲ್ಲಿ ಪ್ರಯಾಣಿಕರಿಂದ 2 ಸಾವಿರ ರೂಪಾಯಿಯ ನೋಟುಗಳನ್ನು ತೆಗೆದುಕೊಳ್ಳದಂತೆ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂಬುದು ಸುಳ್ಳು. ಪ್ರಯಾಣಿಕರಿಂದ 2 ಸಾವಿರ ನೋಟುಗಳನ್ನು ಸಂಚಾರದ ವೇಳೆಯಲ್ಲಿ ನಿರ್ವಾಹಕರು ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದೆ.
ಹೊಸಕೋಟೆ ಘಟಕದಿಂದ ತಪ್ಪು ಆದೇಶ: ಬಿಎಂಟಿಸಿ ಕೇಂದ್ರ ಕಚೇರಿಯಿಂದ ಬಸ್ನಲ್ಲಿ ನಿರ್ವಾಹಕರು 2000 ರು ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿಲ್ಲ. ಹೊಸಕೋಟೆ ಘಟಕದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿತ್ತು. ತದನಂತರ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದೆ.
ನೋಟು ವಿನಿಮಯಕ್ಕೆ ಆತುರ ಬೇಡ:ಇನ್ನೊಂದೆಡೆ, ಎರಡು ಸಾವಿರ ರೂಪಾಯಿ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂಪಡೆದಿದೆ. ಅದನ್ನು ವಿನಮಯ ಮಾಡಿಕೊಳ್ಳುವಲ್ಲಿ ಯಾವುದೇ ಆತುರ ಬೇಡ. ನೀಡಿರುವ ಗಡುವಿನ ದಿನಾಂಕದೊಳಗೆ ಹಣವನ್ನು ಬದಲಿಸಿಕೊಳ್ಳಲೇಬೇಕೆಂದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ (ಮೇ 22-2023) ರಂದು ಹೇಳಿದ್ದರು. ಈ ಮೂಲಕ ನೋಟಿನ ಬದಲಾವಣೆಗೆ ನೀಡಲಾಗಿದ್ದ ಗಡುವು ವಿಸ್ತರಿಸುವ ಸುಳಿವನ್ನು ಅವರು ನೀಡಿದ್ದರು.