ಬೆಂಗಳೂರು:ಗಂಗಾ ಸ್ನಾನಂ ತುಂಗಾ ಪಾನಂ ಎನ್ನುವ ಗಾದೆ ಮಾತಿನಂತೆ ಕುಡಿಯಲು ಉತ್ಕೃಷವಾದ ಸ್ವಾದ ಹೊಂದಿದ್ದ ತುಂಗಾ ನದಿ, ರಾಜ್ಯದ ಜೀವನದಿಯಾದ ಕಾವೇರಿ, ಕೃಷ್ಣಾ ಸೇರಿದಂತೆ ಜೀವನದಿಗಳ ನೀರು ಇದೀಗ ಶುದ್ಧೀಕರಣ ಮಾಡದೇ ಕುಡಿಯಲೂ ಯೋಗ್ಯವಿಲ್ಲದ ಸ್ಥಿತಿಗೆ ತಲುಪಿದೆ. ಕೆಲವು ನದಿಗಳ ನೀರು ಕಾಮನ್ ಆಗಿ ಸಂಸ್ಕರಣೆ ಮಾಡಿ ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ಯೋಗ್ಯವಲ್ಲದಂತಾಗಿದೆ. ನೇತ್ರಾವತಿ ನದಿಯೂ ಈಗ ಸ್ನಾನಯೋಗ್ಯವಲ್ಲ ಎನ್ನುವ ಆತಂಕಕಾರಿ ಅಂಶವನ್ನೊಳಗೊಂಡ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ.
ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆಯಡಿ ನದಿ ಮತ್ತು ಕೆರೆಗಳ ನೀರಿನ ಗುಣಮಟ್ಟದ 2022ರ ಏಪ್ರಿಲ್ನಿಂದ - ನವೆಂಬರ್ವರೆಗಿನ ವಿಸ್ತೃತ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ್ದು, ಅದರಲ್ಲಿ ರಾಜ್ಯದ ಜೀವನದಿಗಳೆನಿಸಿರುವ ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ಯಾವುದೇ ನದಿಗಳ ನೀರನ್ನು ಸಂಸ್ಕರಿಸದೇ ಕುಡಿಯುವಂತಿಲ್ಲ.
ಕೆಲವು ನದಿಗಳ ನೀರು ಸ್ನಾನಕ್ಕೂ ಬಳಸಲಾಗದ ಸ್ಥಿತಿ ತಲುಪಿವೆ ಎನ್ನುವ ಅಂಶಗಳನ್ನು ಉಲ್ಲೇಖಿಸಿದೆ. ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದೆ. ಅಲ್ಲಿಂದ ನೀರಿನ ಮಾದರಿ ಸಂಗ್ರಹಿಸಿ, ಅಧ್ಯಯನ ನಡೆಸಿ ಗುಣಮಟ್ಟವನ್ನು ದಾಖಲಿಸಿದ್ದು, ಐದು ವರ್ಗಗಳಲ್ಲಿ ನೀರಿನ ಮಟ್ಟವನ್ನು ಗುರುತಿಸಲಾಗಿದೆ.
ತಿಂಗಳುಗಳ ಹಿಂದೆ ಸ್ನಾನಕ್ಕೆ ಯೋಗ್ಯವಾಗಿದ್ದ ನದಿಗಳು: ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಈವರೆಗೂ ಬಿ ವರ್ಗಕ್ಕೆ ಸೇರಿದ್ದು, ಉಳಿದ ನದಿಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದವು. ಆದರೆ, ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಹರಿಯುವ ಪವಿತ್ರ ನೇತ್ರಾವತಿ ನದಿ ನೀರು ಅಕ್ಟೋಬರ್ನಲ್ಲಿ ಸ್ನಾನಕ್ಕೆ ಯೋಗ್ಯವಾಗಿತ್ತು ಎನ್ನುವ ಅಂಶವನ್ನು ಉಲ್ಲೇಖಿಸಿ ನವೆಂಬರ್ ವರದಿಯಲ್ಲಿ ಕಲ್ಮಶ ಹೆಚ್ಚಾಗಿದ್ದು, ಬಿ ವರ್ಗದಿಂದ ಸಿ ವರ್ಗಕ್ಕೆ ಕುಸಿದಿದೆ ಎಂದು ತಿಳಿಸಿದೆ. ಇದರಿಂದಾಗಿ ಹೊರಾಂಗಣದಲ್ಲಿ ಈ ನೀರು ಸ್ನಾನಕ್ಕೂ ಯೋಗ್ಯವಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಲ್ಮಶ ಹೆಚ್ಚಿಸಿಕೊಂಡು ಸಿ ವರ್ಗಕ್ಕೆ ಇಳಿದ ನದಿಗಳು: ಮಂಗಳೂರು ಸಮೀಪದ ಉಪ್ಪಿನಂಗಡಿಯಲ್ಲಿ ನೇತ್ರಾವತಿಗೆ ಸೇರುವ ಮುನ್ನ ಕುಮಾರಧಾರಾ ನದಿ, ಕಲಬುರಗಿಯಲ್ಲಿ ಕಾಗಿಣಾ ನದಿ, ಸುವರ್ಣವತಿ ಜಲಾಶಯದ ನೀರು, ಚಾಮರಾಜನಗರದ ಅಟ್ಟಿಗುಲ್ಲಿಪುರ, ಭದ್ರಾವತಿ ಎಂಪಿಎಂ ಬಳಿ ಭದ್ರಾ ನದಿಯ ನೀರು ಹೆಚ್ಚು ಕಲ್ಮಶವಾಗಿ ಬಿ ವರ್ಗದಿಂದ ಸಿ ವರ್ಗಕ್ಕೆ ಕುಸಿದಿವೆ. ಅದೇ ರೀತಿ ಕನಕಪುರದಲ್ಲಿ ಅರ್ಕಾವತಿ, ಸಂಗಮದಲ್ಲಿ ಕಾವೇರಿ, ಕಲಬುರಗಿಯ ಸೇಡಂ, ಶಹಾಬಾದ್ ಸೇತುವೆ ಹಾಗೂ ಬೆಣ್ಣೆತೊರಾ ಜಲಾಶಯ ಸೇರುವ ಕಾಗಿಣಾ ನದಿ, ಜೇವರ್ಗಿ, ಫಿರೋಜಾಬಾದ್, ಗಾಣಗಾಪುರದಲ್ಲಿ ಭೀಮಾ ನದಿ, ಮೈಸೂರಿನ ಕಟ್ಟೆಮಳಲವಾಡಿ ಹಾಗೂ ಹುಣಸೂರು ನಗರದಲ್ಲಿ ಲಕ್ಷ್ಮಣತೀರ್ಥ ನದಿ, ದಾವಣಗೆರೆಯ ಹರಿಹರದಲ್ಲಿ ತುಂಗಭದ್ರಾ ನದಿ, ತುಮಕೂರಿನ ಎಡೆಯೂರು ಬಳಿ ಶಿಂಷಾ ನದಿ ನೀರು ವನ್ಯಜೀವಿಗಳು ಕುಡಿಯಲು ಹಾಗೂ ಮೀನುಗಾರಿಕೆಗೆ ಮಾತ್ರ ಯೋಗ್ಯವಾಗಿವೆ. ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿ ಇ ವರ್ಗದಲ್ಲಿದ್ದು, ಲೋಹಯುಕ್ತ, ಕಲ್ಮಶಕಾರಕವಾಗಿದೆ ಎನ್ನುವ ಅಂಶವನ್ನು ವರದಿಯಲ್ಲಿ ಪ್ರಕಟಿಸಲಾಗಿದೆ.