ಬೆಂಗಳೂರು :ದೇಶದ 2011ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 6.11 ಕೋಟಿ ಜನರು ಇದ್ದಾರೆ ಎಂದು ದಾಖಲೆಯಾಗಿತ್ತು. ಅದರಲ್ಲಿ 3,09,66,657 ಪುರುಷರು ಹಾಗೂ 3,01,28,640 ಮಹಿಳೆಯರು ಎಂದು ಹೇಳಲಾಗಿತ್ತು.
2001ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 5.29 ಕೋಟಿ ಜನರಿಂದ 2011ರ ಜನಗಣತಿಯ ವೇಳೆಗೆ 10 ವರ್ಷದ ಅಂತರದಲ್ಲಿ 82 ಲಕ್ಷ ಜನಸಂಖ್ಯೆ ಹೆಚ್ಚಳ ಆಗಿತ್ತು. ಮುಂಬರುವ 2021ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 7.05 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ ಜನಗಣತಿ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ವಿಶ್ವ ಜನಸಂಖ್ಯಾ ದಿನದಂದು 2011ರ ಜನಗಣತಿಯಲ್ಲಿ ರಾಜ್ಯದಲ್ಲಿ ಮತದಾರರು, ಅಕ್ಷರಸ್ಥರು ಹಾಗೂ ಇನ್ನುಳಿದ ಮಾಹಿತಿಯನ್ನು ಒಮ್ಮೆ ಗಮನಿಸೋಣ.
2011, ರಾಜ್ಯದಲ್ಲಿ 30 ಜಿಲ್ಲೆಗಳು 176 ತಾಲೂಕು 29340 ಹಳ್ಳಿಗಳು, 347 ಪಟ್ಟಣಗಳಲ್ಲಿ ಜನಗಣತಿ ಮಾಡಲಾಯಿತು. 2011ರಲ್ಲಿ ರಾಮನಗರ ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ನೂತನ ಜಿಲ್ಲೆಯೆಂದು ಮಾನ್ಯತೆ ಪಡೆದಿತ್ತು. ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕ ಶೇ. 5.05 ಭಾಗವನ್ನು ಹೊಂದಿತ್ತು. ಹಾಗೂ ಜನಸಂಖ್ಯೆಯಲ್ಲಿ ರಾಜ್ಯ 9ನೇ ಸ್ಥಾನವನ್ನು ಪಡೆದಿತ್ತು. ವಿಶೇಷವೆಂದ್ರೆ 2001ರ ಜನಗಣತಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನವೇ ಇತ್ತು.