ಕರ್ನಾಟಕ

karnataka

ETV Bharat / state

ರಾಜಕೀಯದ ಮೇಲೂ ಕೊರೊನಾ ಕರಿನೆರಳು: ರಾಜ್ಯ ಪಾಲಿಟಿಕ್ಸ್ ಸ್ತಬ್ಧ - ರಾಜಕಾರಣದ ಮೇಲೆ ಕೊರೊನಾ ಭೀತಿ

ರಾಜ್ಯ ರಾಜಕಾರಣವೂ ಕೊರೊನಾ ಸೋಂಕಿನ ಹಾವಳಿಯಿಂದ ಸಂಪೂರ್ಣ ನಿಶ್ಯಬ್ಧವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಕೂಡಾ ಹಲವು ರಾಜಕೀಯ ತಂತ್ರಗಳನ್ನು ಹೆಣೆದುಕೊಂಡಿದ್ದು, ಎಲ್ಲವೂ ತಲೆಕೆಳಗಾಗಿವೆ.

state politics complete down due to corona virus
ರಾಜಕೀಯದ ಮೇಲೂ ಕೊರೊನಾ ಕರಿನೆರಳು

By

Published : Apr 1, 2020, 7:58 PM IST

ಬೆಂಗಳೂರು: ರಾಜ್ಯ ರಾಜಕಾರಣದ ಮೇಲೂ ಕೊರೊನಾ ಸೋಂಕಿನ ಕರಿನೆರಳು ಆವರಿಸಿದೆ ಎಂತಲೇ ಹೇಳಬಹುದು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹಾಗೂ ನಂತರ ಪತನ, ಬಿಜೆಪಿ ಆಪರೇಷನ್, ಬಿಜೆಪಿ ಸರ್ಕಾರ ರಚನೆ ಹೀಗೆ ಸುದ್ದಿಯಲ್ಲಿದ್ದ ರಾಜ್ಯ ರಾಜಕಾರಣ ಹಲವು ತಿರುವುಗಳಿಂದ ದೇಶದ ಗಮನ ಸೆಳೆದಿತ್ತು.

ರಾಜಕೀಯದ ಮೇಲೂ ಕೊರೊನಾ ಕರಿನೆರಳು

ಬಿಜೆಪಿ ಸರ್ಕಾರದ ಆಡಳಿತದ ವಿಫಲತೆಯನ್ನು ಎತ್ತಿತೋರಿಸಲು ಹವಣಿಸುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ ಕೊರೊನಾ ನಿರಾಸೆ ಮೂಡಿಸಿದೆ. ಸಂಪೂರ್ಣ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಕೊರೊನಾ ಅವಾಂತರದ ಮಧ್ಯೆಯೇ ಕೆಪಿಸಿಸಿ ಪಟ್ಟಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಸಾರಥಿಯಾಗಿ ಕೈ ಹೈಕಮಾಂಡ್ ಘೋಷಿಸಿತು.

ಆದರೆ ಕೊರೊನಾ ಹಾವಳಿಯಿಂದ ಪಕ್ಷ ಸಂಘಟನೆ ಸಾಧ್ಯವಾಗದಿದ್ದರೂ ನಾಯಕರನ್ನು ಭೇಟಿ ಮಾಡುವ ಮೂಲಕ ಪಕ್ಷ ಸಂಘಟನೆಗೆ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದಾರೆ. ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರೆಂದು ಘೋಷಿಸಿದ್ದು, ಪದಗ್ರಹಣ ಕಾರ್ಯಕ್ರಮಕ್ಕೆ ಕೊರೊನಾ ಅಡ್ಡಿಯುಂಟಾಗಿದೆ. ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಆಲೋಚನೆಯಲ್ಲಿದ್ದ ಡಿ.ಕೆ.ಶಿವಕುಮಾರ್ ಮತ್ತವರ ತಂಡಕ್ಕೆ ಭಾರಿ ನಿರಾಶೆಯಾಗಿದೆ. ಇನ್ನೊಂದೆಡೆ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಪಕ್ಷದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಯೋಚಿಸಿತ್ತು. ಅದು ಕೂಡಾ ಹಾಗೇ ಉಳಿದಿದೆ.

ಇನ್ನೊಂದೆಡೆ ಪ್ರಾದೇಶಿಕ ಪಕ್ಷ ಜೆಡಿಎಸ್​ ಸಭೆ, ಸಮಾರಂಭಗಳನ್ನು ನಡೆಸದಿರಲು ನಿರ್ಧರಿಸಿದೆ. ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದ ಜೆಡಿಎಸ್​​, ಈಗಾಗಲೇ ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸಿ ವಾರ್ಡ್ ಅಧ್ಯಕ್ಷರ ನೇಮಕ, ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಮಾಲೋಚನೆ ನಡೆಸಲಾಗಿತ್ತು. ಪ್ರತಿ ವಾರ್ಡ್‍ಗಳಲ್ಲೂ ಸ್ಟ್ರೀಟ್ ಕಾರ್ನರ್ ಸಭೆಗಳನ್ನು ನಡೆಸಿ ಜನರ ವಿಶ್ವಾಸ ಗಳಿಸುವ ಉದ್ದೇಶ ಹೊಂದಿತ್ತು. ಅಲ್ಲದೆ, ಸದಸ್ಯತ್ವ ನೋಂದಣಿಯನ್ನು ಚುರುಕುಗೊಳಿಸಲು ತೀರ್ಮಾನಿಸಿತ್ತು. ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಸದ್ಯಕ್ಕೆ ಎಲ್ಲವನ್ನು ಮುಂದೂಡಿದೆ.

ಮೂರು ಪ್ರಮುಖ ಪಕ್ಷಗಳು ಈಗಾಗಲೇ ಶಾಸಕರು ಹಾಗೂ ಪದಾಧಿಕಾರಿಗಳಿಗೆ ಕರೆ ನೀಡಿ ಕೊರೊನಾ ಪೀಡಿತರ ಸಂಕಟ ಆಲಿಸಲು ಸೂಚಿಸಿವೆ. ಕೆಲವು ಕಡೆಗಳಲ್ಲಂತೂ ಪರಿಹಾರ ವಿತರಣೆಗೆ ಪೈಪೋಟಿ ಆರಂಭವಾಗಿದೆ. ಊಟೋಪಚಾರ, ದಿನಸಿ ವಿತರಣೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆಗೆ ಪಕ್ಷಗಳು ಹೆಚ್ಚು ಆಸಕ್ತಿ ತೋರಿವೆ. ಮೇಲ್ನೋಟಕ್ಕೆ ಇದು ನೆರವು ನೀಡುವಂತೆ ಕಂಡು ಬಂದರೂ ಭವಿಷ್ಯದ ರಾಜಕೀಯ ಲೆಕ್ಕಾಚಾರದಲ್ಲೇ ಮೂರೂ ಪಕ್ಷಗಳು ಹೆಜ್ಜೆ ಇಡುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.

ABOUT THE AUTHOR

...view details