ಬೆಂಗಳೂರು:ದಕ್ಷಿಣ ಒಳನಾಡು, ಮಲೆನಾಡು ಸೇರಿದಂತೆ ಇತರೆ ಕೆಲ ಭಾಗದಲ್ಲಿ ಸಾಧಾರಣದಿಂದ ಕೂಡಿದ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಏಪ್ರಿಲ್ 6ರಿಂದ 9ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಏಪ್ರಿಲ್ 7ರವರೆಗೆ ಒಣ ಹವೆ ಮುಂದುವರೆಯುವ ಹೆಚ್ಚಿನ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಮಳೆ ಮುನ್ಸೂಚನೆ ಬಗ್ಗೆ ಮಾತನಾಡಿದ ಸಿ.ಎಸ್.ಪಾಟೀಲ್ ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆ ಮಳೆಯಾಗಿದ್ದು, ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಒಣ ಹವೆ ಮುಂದುವರೆಯಲಿದೆ. ಗರಿಷ್ಠ ಉಷ್ಣಾಂಶ 32ರಿಂದ 35 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 25 ರಿಂದ 27 ಡಿಗ್ರಿ ದಾಖಲಾಗಿದೆ ಎಂದರು.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 41.7 ಡಿಗ್ರಿ ದಾಖಲಾಗಿದ್ದು, ವಿಜಯಪುರದಲ್ಲಿ 39 ಡಿಗ್ರಿ , ರಾಯಚೂರಿನಲ್ಲಿ 39.4, ಕೊಪ್ಪಳ 38.5, ಗದಗ 37.7, ಬೀದರ್ 37.8, ಧಾರವಾಡ 37.2 , ಬೆಳಗಾವಿ 36, ದಾವಣಗೆರೆ 38, ಬೆಂಗಳೂರು 36, ಮೈಸೂರು 36.1 ಡಿಗ್ರಿ ಎಂದು ತಿಳಿಸಿದರು.
ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಏಪ್ರಿಲ್ 8 ಹಾಗೂ 9ರಂದು ಹಗುರ ಮಳೆಯಾಗಲಿದೆ. ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಏಪ್ರಿಲ್ 5 ರಿಂದ 9ರವರೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದರು.
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನ ಗರಿಷ್ಠ 36 ಡಿಗ್ರಿ ಹಾಗೂ ಕನಿಷ್ಠ 22 ಡಿಗ್ರಿ ಉಷ್ಣಾಂಶ ದಾಖಲಾಗಲಿದೆ ಎಂದು ಸಿ.ಎಸ್ ಪಾಟೀಲ್ ತಿಳಿಸಿದರು.