ಬೆಂಗಳೂರು: ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಗೊಳಿಸದಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಅಬ್ದುಲ್ ಅಜೀಂ ತಿಳಿಸಿದ್ದಾರೆ.
ವಿವಿ ಟವರ್ನ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ಹಿಂಪಡೆಯಬೇಕೆಂಬ ಬಿಜೆಪಿ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸರ್ಕಾರಕ್ಕೆ ಆಯೋಗದಿಂದ ಪತ್ರ ಬರೆಯುತ್ತೇವೆ. ಮೀಸಲಾತಿಯನ್ನು ಕಾನೂನಾತ್ಮಕವಾಗಿ ಸರ್ಕಾರವೇ ನೀಡಿದೆ. ಪತ್ರ ಬರೆದ ಶಾಸಕರಿಗೆ ಆಯೋಗದಿಂದ ಪತ್ರ ಬರೆಯಲ್ಲ ಬದಲಿಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಆಯೋಗ ಸುಮ್ಮನೆ ಕೂತಿಲ್ಲ. ಶಾಸಕರು ಪತ್ರ ಬರೆದಾಕ್ಷಣ ಮುಸ್ಲಿಂ ಮೀಸಲಾತಿ ರದ್ದಾಗಲ್ಲ. ಮುಸ್ಲಿಮರಿಗೆ ಮೀಸಲಾತಿ ರದ್ದುಮಾಡದಂತೆ ಸರ್ಕಾರಕ್ಕೆ ಮನವಿ ಮಾಡ್ತೇವೆ ಎಂದರು.
ಶಾಸಕರು ಮನವಿ ಮಾಡಲು ಸ್ವಾತಂತ್ರ್ಯ ಇದೆ. ಆದ್ರೆ ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ಮೀಸಲಾತಿ ಕೊಟ್ಟಿರೋದು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿ ನೋಡಿ. ಮುಖ್ಯ ಶ್ರೇಣಿಗೆ ಸಮುದಾಯ ಬರಲಿ ಅಂತ ಮೀಸಲಾತಿ ಕೊಡಲಾಗಿದೆ. ಶಾಸಕರ ಮನವಿಯನ್ನು ಸರ್ಕಾರ ಪರಿಶೀಲನೆ ಮಾಡಲಿದೆ. ಶಾಸಕು ಒತ್ತಾಯ ಮಾಡಿರೋದು ಸರಿಯಲ್ಲ ಅಂತ ನಾವು ಹೇಳುವುದು ಹೇಗೆ? ಅವರ ಮನವಿಯನ್ನು ಸರ್ಕಾರ ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ವಹಿಸಲಿದೆ ಎಂದರು. ನಮಗೆ ರಾಜಕೀಯ ಮೀಸಲಾತಿ ಬೇಕು. ಪಾಲಿಕೆ ಮಟ್ಟದಲ್ಲಿ, ನಗರ ಪಾಲಿಕೆ ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದ ಮೀಸಲಾತಿ ಬಗ್ಗೆ ಅಬ್ದುಲ್ ಅಜೀಂ ಪ್ರತಿಕ್ರಿಯೆ 6% ಮೀಸಲಾತಿ ಹೆಚ್ಚಿಸಲು ಮನವಿ:ಅಲ್ಪಸಂಖ್ಯಾತರಿಗೆ ಶೇ.4ರಿಂದ ಶೇ.6ಕ್ಕೆ ಮೀಸಲಾತಿ ಹೆಚ್ಚಿಸುವಂತೆ ಮನವಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದು ಶೇ.6ಕ್ಕೆ ಮೀಸಲಾತಿ ಏರಿಕೆ ಮಾಡುವ ವಿಚಾರಕ್ಕೆ ಒತ್ತಾಯ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮರು ಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂಬಂಧ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಮಾಡಲು ಮನವಿ ಮಾಡುತ್ತೇವೆ. ಸಮುದಾಯದ ಅಭಿಪ್ರಾಯ ಸಂಗ್ರಹಿಸಿ, ಕಾನೂನು ಪ್ರಕಾರ ಮೀಸಲಾತಿ ಕೊಡಿ ಎಂದು ಕೇಳುತ್ತೇವೆ. ಜತೆಗೆ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಸದ್ಯ 4% ಇರುವ ಮೀಸಲಾತಿ 6% ಕ್ಕೆ ಏರಿಸಲು ಸರ್ಕಾರಕ್ಕೆ ಮನವಿ ಮಾಡ್ತೇವೆ. ಈ ಸಂಬಂಧ ಆಯೋಗ ರಚಿಸಿ ಪರಿಶೀಲಿಸಲು ಸರ್ಕಾರಕ್ಕೆ ಮನವಿ ಮಾಡ್ತೇವೆ ಎಂದರು.
ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಸ್ಪರ ಚರ್ಚೆ ಅಗತ್ಯ. ಕೋರ್ಟ್ ಆದೇಶ, ಸರ್ಕಾರದ ಆದೇಶ ಪಾಲಿಸಬೇಕು. ಕಾಲೇಜುಗಳಲ್ಲಿ ಕೆಲವರು ಹಿಜಾಬ್ ಹಾಕಿಕೊಳ್ಳುತ್ತಾರೆ, ಕೆಲವರು ಹಾಕಿಕೊಳ್ಳಲ್ಲ. ಹಿಜಾಬ್ ಬೇಕು ಎನ್ನುವವರು ಪ್ರಚೋದನೆಗೆ ಒಳಗಾಗಿದ್ದಾರೆ. ಸಮುದಾಯ, ಪೋಷಕರಿಗೆ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಆಯೋಗ ಮಾಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮತಾಂತರ ಪ್ರಕರಣ ಮತ್ತೆ ಸದ್ದು ವಿಚಾರವಾಗಿ ಪ್ರತಿಕ್ರಿಯಿಸಿ, ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಯಾರೇ ಬಲವಂತದ ಮತಾಂತರ ಮಾಡಿದರೂ ಕಾನೂನು ಪ್ರಕಾರ ಅಪರಾಧ. ಈಗ ಮತಾಂತರ ಪ್ರಕರಣ ಕಂಡುಬಂದಿದೆ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಬೇಕು. ಆಯೋಗ ಹಾಗೂ ನಾವು ಮತಾಂತರ ಬೆಂಬಲಿಸಲ್ಲ ಎಂದರು.
ಆಯೋಗದ ಶಿಫಾರಸುಗಳೇನು?:ರಾಜ್ಯದ ಒಬಿಸಿ ಪಟ್ಟಿಯಲ್ಲಿ ಸಿಖ್ಖರು, ಶ್ವೇತಾಂಬರ ಜೈನ್ ಸಮುದಾಯವನ್ನು ಸೇರಿಸಬೇಕು. ಶಾಲಾ ಪಠ್ಯಪುಸ್ತಕದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸಮುದಾಯಗಳ ಪಾಠವನ್ನು ಸೇರಿಸಬೇಕು. ಪ್ರತ್ಯೇಕ ಜೈನ್ ಪರ್ಸನಲ್ ಲಾ ಮತ್ತು ಜೈನ್ ದೇವಸ್ಥಾನಗಳ ಮೇಲಿನ ನಿಯಂತ್ರಣ ನೀಡಬೇಕು. ಜೈನ ಸಮುದಾಯಕ್ಕೆ ಜೈನ ಅಭಿವೃದ್ಧಿ ಮಂಡಳಿ ರಚನೆಗೆ ಶಿಫಾರಸು. 2001ರಲ್ಲಿ 4 ಲಕ್ಷದಲ್ಲಿ ಇದ್ದ ಬುದ್ಧ ಸಮುದಾಯದ ಜನಸಂಖ್ಯೆ 2011ರಲ್ಲಿ 75,000 ಇದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮರುಪರಿಶೀಲನೆ ಮಾಡುವಂತೆ ಕೋರಿದ್ದೇವೆ ಎಂದರು.
ಇದನ್ನೂ ಓದಿ:ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ಏಳನೇ ವೇತನ ಆಯೋಗ ರಚನೆ ಬಗ್ಗೆ ಸಿಎಂ ಘೋಷಣೆ