ಕರ್ನಾಟಕ

karnataka

ETV Bharat / state

ದೇಶದ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕವೇ ಮುಂಚೂಣಿ.. ರಾಜ್ಯ ಜಿಎಸ್​ಟಿ ಸಂಗ್ರಹದಲ್ಲಿ ಕುಂಠಿತ - ETv Bharat Knnada news

ದೇಶದಲ್ಲೇ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇದ್ದರೂ ರಾಜ್ಯ ಜಿಎಸ್​ಟಿ ಸಂಗ್ರಹದಲ್ಲಿ ಕುಂಠಿತಗೊಂಡಿದೆ.

Vidhana Soudha
ವಿಧಾನಸೌಧ

By

Published : Dec 11, 2022, 5:48 PM IST

ಬೆಂಗಳೂರು:ಒಟ್ಟು ಕೇಂದ್ರ ಹಾಗೂ ರಾಜ್ಯ ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ, ಈ ಸಾಲಿನಲ್ಲಿ ನವೆಂಬರ್​​ ವರೆಗೆ ಸಂಗ್ರಹಿಸಿದ ರಾಜ್ಯ ಜಿಎಸ್​ಟಿ ಕಳೆದ ವರ್ಷಕ್ಕೆ ಹೋಲಿಸಿದರೆ ಕುಸಿತ ಕಂಡಿದೆ. ನಿರೀಕ್ಷೆಗೂ ಮೀರಿ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇತ್ತ ರಾಜ್ಯದ ಬೊಕ್ಕಸ ತುಂಬಿಸುವಲ್ಲಿ ಜಿಎಸ್​ಟಿ ಹಾಗೂ ತೈಲ ಮೇಲಿನ ಕರ್ನಾಟಕ ಮಾರಾಟ ತೆರಿಗೆ ಗಣನೀಯ ಪಾಲು ಹೊಂದಿದೆ.

ರಾಜ್ಯ ಸರ್ಕಾರ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿಗೆ ಆದಾಯ ಸಂಗ್ರಹ ಮಾಡುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಎಲ್ಲಾ ಪ್ರಮುಖ ತೆರಿಗೆ ಮೂಲಗಳಿಂದ ನವೆಂಬರ್ ವರೆಗೆ ಭರ್ಜರಿ ಆದಾಯ ಸಂಗ್ರಹವಾಗಿದೆ. ಸರ್ಕಾರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿರುವುದರಿಂದ ಬೊಮ್ಮಾಯಿ‌ ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ಪ್ರಮುಖವಾಗಿ ಮುದ್ರಣ ಹಾಗೂ ನೋಂದಣಿ ಶುಲ್ಕ, ಮೋಟಾರು ವಾಹನ ತೆರಿಗೆ, ಅಬಕಾರಿ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ ಗುರಿ ಮೀರಿ ಆದಾಯ ಸಂಗ್ರಹಿಸುತ್ತಿತ್ತು. ಆದರೆ, ಈ ಬಾರಿ ಜಿಎಸ್​ಟಿ ಹಾಗೂ ಕರ್ನಾಟಕ ಮಾರಾಟ ತೆರಿಗೆ ಸಂಗ್ರಹ ಕುಂಠಿತ ಕಂಡಿದೆ.

ನವೆಂಬರ್ ತಿಂಗಳವರೆಗೆ ಕರ್ನಾಟಕ ಬರೋಬ್ಬರಿ 80,269 ಕೋಟಿ ರೂ. ಜಿಎಸ್ ಟಿ ಸಂಗ್ರಹಿಸಿ ಅಗ್ರಪಟ್ಟ ಅಲಂಕರಿಸಿತ್ತು. ಕಳೆದ ವರ್ಷ ಕರ್ನಾಟಕ ನವೆಂಬರ್ ವರೆಗೆ 60,068 ಕೋಟಿ ರೂ. ಒಟ್ಟು ಜಿಎಸ್ ಟಿ ಸಂಗ್ರಹಿಸಿತ್ತು. ಮಹಾರಾಷ್ಟ್ರ ಬಿಟ್ಟರೆ ಬಳಿಕದ ಸ್ಥಾನ ಕರ್ನಾಟಕಕ್ಕೆ ಸಲ್ಲುತ್ತದೆ. ಅದರಲ್ಲೂ ಜಿಎಸ್​ಟಿ ಸಂಗ್ರಹದ ಬೆಳವಣಿಗೆ ದರ 34% ಇದೆ. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು ಬೆಳವಣಿಗೆ ದರವಾಗಿದೆ.

ದೇಶದಲ್ಲೇ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿ

ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ರಾಜ್ಯ ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ ಕಳೆದ ವರ್ಷಕ್ಕೆ ಹೋಲಿಸಿದರೆ ಹಿಂದೆ ಬಿದ್ದಿದೆ. ವಾಣಿಜ್ಯ ಇಲಾಖೆ ನೀಡಿದ ಅಂಕಿಅಂಶದಂತೆ ಕಳೆದ ವರ್ಷ ನವೆಂಬರ್ ವರೆಗೆ ರಾಜ್ಯ ಸರ್ಕಾರ 54,517.94 ಕೋಟಿ ರೂ. ರಾಜ್ಯ ಜಿಎಸ್ ಟಿ ಸಂಗ್ರಹಿಸಿತ್ತು. ಆದರೆ, ಅದೇ ಈ ವರ್ಷ ನವೆಂಬರ್ ವರೆಗೆ 50,600.70 ಕೋಟಿ ರೂ. ರಾಜ್ಯ ಜಿಎಸ್ ಟಿ ಸಂಗ್ರಹಿಸಲಾಗಿದೆ. ಅಂದರೆ ಈ ಬಾರಿ 3,917.24 ಕೋಟಿ ರೂ.ರಷ್ಟು ಸಂಗ್ರಹ ಕುಸಿತವಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ರಾಜ್ಯ ಜಿಎಸ್ ಟಿ ಸಂಗ್ರಹ ಕಳೆದ ಬಾರಿಗಿಂತಲೂ ಅಧಿಕವಾಗಲಿದೆ ಎಂಬುದು ವಾಣಿಜ್ಯ ಇಲಾಖೆ ಅಧಿಕಾರಿಗಳ ವಿಶ್ವಾಸ.

ತೈಲ ಮೇಲಿನ ಮಾರಾಟ ತೆರಿಗೆ ಸಂಗ್ರಹದಲ್ಲೂ ಕುಸಿತ :ಇತ್ತ ತೈಲ ಮೇಲಿನ ಮಾರಾಟ ತೆರಿಗೆ ಸಂಗ್ರಹದಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನವೆಂಬರ್ ವರೆಗೆ ಕುಸಿತ ಕಂಡಿದೆ. 2021-22ರಲ್ಲಿ ನವೆಂಬರ್ ವರೆಗೆ ಕರ್ನಾಟಕ‌ ಮಾರಾಟ ತೆರಿಗೆ 13,386.69 ಕೋಟಿ ರೂ.ಸಂಗ್ರಹವಾಗಿತ್ತು. ಈ ಬಾರಿ ನವೆಂಬರ್ ವರೆಗೆ ಕರ್ನಾಟಕ ಮಾರಟ ತೆರಿಗೆ ರೂಪದಲ್ಲಿ 12,524.47 ಕೋಟಿ ರೂ. ಸಂಗ್ರಹವಾಗಿದೆ. ಆ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನವೆಂಬರ್ ವರೆಗಿನ ಸಂಗ್ರಹದಲ್ಲಿ 862.22 ಕೋಟಿ ರೂ.ನಷ್ಟು ಕುಂಠಿತ ಕಂಡಿದೆ.

ಟಾಪ್ 5 ಜಿಎಸ್ ಟಿ ಸಂಗ್ರಹ ರಾಜ್ಯ (ನವೆಂಬರ್ ವರೆಗೆ):
ಮಹಾರಾಷ್ಟ್ರ:
2021-22: 1,37,969 ಕೋಟಿ
2022-23: 1,77,192 ಕೋಟಿ
ಬೆಳವಣಿಗೆ ದರ: 28%

ಕರ್ನಾಟಕ
2021-22: 60,068 ಕೋಟಿ
2022-23: 80,269 ಕೋಟಿ
ಬೆಳವಣಿಗೆ ದರ: 34%

ಗುಜರಾತ್:
2021-22: 63,173 ಕೋಟಿ
2022-23: 75,481 ಕೋಟಿ
ಬೆಳವಣಿಗೆ ದರ: 19%

ತಮಿಳುನಾಡು:
2021-22: 55,462 ಕೋಟಿ
2022-23: 69,224 ಕೋಟಿ
ಬೆಳವಣಿಗೆ ದರ: 25%

ಉತ್ತರ ಪ್ರದೇಶ:
2021-22: 47,713 ಕೋಟಿ
2022-23: 57,991 ಕೋಟಿ
ಬೆಳವಣಿಗೆ ದರ: 22%

ಇದನ್ನೂಓದಿ :ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರಪೂರ ತೆರಿಗೆ: ಆರು ತಿಂಗಳಲ್ಲಿ 47 ಸಾವಿರ ಕೋಟಿ ರೂ‌. ಸಂಗ್ರಹ!

ABOUT THE AUTHOR

...view details